ದಾವಣಗೆರೆ, ಮಾ. 13- ಇಂದಿನ ಪೀಳಿಗೆಗೆ ರಂಗಕಲೆಗಳ ಆಸಕ್ತಿ ಬೆಳೆಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ಬಾ.ಮ.ಬಸವರಾಜಯ್ಯ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯು ಇಲ್ಲಿನ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಮತ್ತು ಸೋಮವಾರ ಹಮ್ಮಿಕೊಂಡಿರುವ ಅಮೃತ ರಂಗ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಜನರಿಗೆ ರಂಗಕಲೆಗಳ ಆಸಕ್ತಿ ಇತ್ತು. ಇತ್ತೀಚೆಗೆ ಈ ಆಸಕ್ತಿ ಕಡಿಮೆಯಾಗಿದೆ. ಜನರು ಟಿ.ವಿ. ಮುಂದೆ ಕುಳಿತುಬಿಟ್ಟಿದ್ದಾರೆ. ಕಲಾವಿದರೂ ಕೂಡ ಧಾರಾವಾಹಿಗಳ ಕಡೆಗೆ ಹೋಗುತ್ತಿದ್ದಾರೆ. ರಂಗ ಚಟುವಟಿಕೆಯಲ್ಲಿ ಅವರ ಆಸಕ್ತಿ ಕಡಿಮೆಯಾಗಿದೆ ಎಂದರು.
ಜನರು ಟಿ.ವಿ. ನೋಡಿ ನೋಡಿ ಬೇಸರಗೊಂಡಿದ್ದಾರೆ. ಹಾಗಾಗಿ ಅವರನ್ನು ರಂಗಚಟುವಟಿಕೆಗಳ ಕಡೆಗೆ ಸೆಳೆಯಬೇಕು. ನಾಟಕಗಳನ್ನು ಅವರು ನೋಡುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ನಾಟಕ ಅಕಾಡೆಮಿಯ ಸದಸ್ಯ ರವೀಂದ್ರ ಎಚ್. ಅರಳಗುಪ್ಪಿ, ‘ನಾನು ಅಕಾಡೆಮಿಯ ಸದಸ್ಯನಾದ ಬಳಿಕ ಇದು ಪ್ರಥಮ ಕಾರ್ಯಕ್ರಮ. ಈ ನಾಟಕೋತ್ಸವವು ಎಲ್ಲರ ಸಹಕಾರದಿಂದ ಯಶಸ್ಸುಗೊಳ್ಳುತ್ತಿದೆ’ ಎಂದು ತಿಳಿಸಿದರು.
ಡಿ.ಆರ್.ಎಂ. ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಡ್ನಾಳ್ ಜಿ. ರುದ್ರೇಶ್ ಭಾಗವಹಿಸಿದ್ದರು. ಕಲಾಕಲ್ಪ ನೃತ್ಯ ಶಾಲೆಯ ಮಕ್ಕಳಿಂದ ರಂಗಗೀತೆಯ ನೃತ್ಯರೂಪಕ ನಡೆಯಿತು. ಹೆಗ್ಗೋಡಿನ ಸಾತ್ವಿಕಂ ಕಲ್ಚರಲ್ ಟ್ರಸ್ಟ್‌ನ ಕಲಾವಿದರಿಂದ ‘ಸ್ಮಶಾನ ವಾಸಿಯ ಸ್ವಗತ’ ನಾಟಕ ಪ್ರದರ್ಶನಗೊಂಡಿತು.