ದಾವಣಗೆರೆ, ಮಾ.13- ದೇಶದಲ್ಲಿನ ಅಸ್ಪೃಶ್ಯತೆ ವಿರುದ್ದ ಆಂದೋಲನ ನಡೆಸಲು ಶ್ರೀರಾಮ ಸೇನೆ ಸಂಕಲ್ಪ ಮಾಡಿದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದ ಸದ್ಯೋಜಾತ ಮಠದಲ್ಲಿ ಭಾನುವಾರ ಶ್ರೀರಾಮ ಸೇನೆಯಿಂದ ನಡೆದ ಹಿಂದೂವಾದಿ, ರಾಷ್ಟ್ರವಾದಿ ಹಿಂದುಳಿದವರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ದೇಶದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಆದರೆ, ನಮ್ಮನ್ನು ಆಳಿದ ವಿದೇಶಿಗರು ಹಿಂದೂಗಳಲ್ಲಿರುವ ಸಮಾನತೆ, ಏಕತೆಯನ್ನು ಒಡೆಯಲು ಅಸ್ಪೃಶ್ಯತೆ ಹುಟ್ಟು ಹಾಕಿದರು ಎಂದು ಕಿಡಿಕಾರಿದರು.
ಜಗತ್ತಿನ ಎಲ್ಲ ದೇಶಗಳಲ್ಲೂ ಬೇರೆ ಬೇರೆ ಸ್ವರೂಪದಲ್ಲಿ ಅಸ್ಪೃಶ್ಯತೆ ಇದೆ. ಅಮೆರಿಕದಲ್ಲಿ ಕರಿಯರು, ಬಿಳಿಯರು, ಮುಸ್ಲಿಮರಲ್ಲಿ ಶಿಯಾ, ಸುನ್ನಿ ಎಂಬ ಭೇದ-ಭಾವ ಇದೆ. ಆದರೆ, ಹಿಂದೂಗಳಲ್ಲಿ ಮಾತ್ರ ಅಸ್ಪೃಶ್ಯತೆ ಇದೆ ಎಂಬುವುದು ತಪ್ಪು ಕಲ್ಪನೆ ಎಂದರು.
ಒಂದು ಮನೆಯಲ್ಲಿ ನಾಲ್ಕೈದು ಜನ ಮಕ್ಕಳಿದ್ದರೆ ಅವರಲ್ಲೊಬ್ಬ ದುರ್ಬಲನಾಗಿದ್ದರೆ ತಾಯಿ ದುರ್ಬಲ ಇರುವ ಮಗುವಿನ ಮೇಲೆ ಹೆಚ್ಚು ಅಕ್ಕರೆ ತೋರಿಸುತ್ತಾಳೆ. ಹಾಗಂತ, ಅವರನ್ನು ಪ್ರತ್ಯೇಕವಾಗಿ ಇಡುವುದು ಸರಿಯಲ್ಲ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂದರು.
ಸ್ವಾತಂತ್ರ್ಯದ ನಂತರ ದೇಶವನ್ನಾಳಿದ ರಾಜಕಾರಣಿಗಳು ಅಸ್ಪೃಶ್ಯತೆ ಹೋಗಲಾಡಿಸಲು ಪ್ರಯತ್ನ ಪಡಲಿಲ್ಲ. ಕೇವಲ ಮತ ಬ್ಯಾಂಕ್‍ಗಳಿಗೆ ದಲಿತರು, ಹಿಂದುಳಿದ ವರ್ಗದವರನ್ನು ಪ್ರತ್ಯೇಕವಾಗಿ ಇಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ, ಶ್ರೀರಾಮ ಸೇನೆ ಅಸ್ಪೃಶ್ಯರನ್ನು ಜೊತೆಗೆ ಕೊಂಡೊಯ್ಯುವ ಸಂಕಲ್ಪ ಮಾಡಿದೆ. ಅಲ್ಲದೇ ಮತಾಂತರಕ್ಕೆ ಕಡಿವಾಣ ಹಾಕಲು ಸಂಘಟನೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗೌರವಾಧ್ಯಕ್ಷ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್ ಅಡ್ಡಿಯಾರ್, ಪ್ರಮೋದ್, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ರಾಜ್ಯ ಕಾರ್ಯದರ್ಶಿ ಪರಶುರಾಮ್ ನಡುಮನಿ ಇನ್ನಿತರರಿದ್ದರು.