ಹರಪನಹಳ್ಳಿ, ಜ.3- ಮಾನವನ ದೇಹದಲ್ಲಿ ಹೇಗೆ ನರನಾಡಿಗಳಿವೆಯೋ ಹಾಗೆ ದೇಶದಲ್ಲಿ ನದಿಗಳು. ಅವುಗಳನ್ನು ಸ್ವಚ್ಚವಾಗಿಟ್ಟರೆ, ದೇಹ ಮತ್ತು ದೇಶ ಆರೋಗ್ಯವಾಗಿರುತ್ತದೆ ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ತಾಲ್ಲೂಕಿನ ದುಗ್ಗಾವತಿ, ಕಡತಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮ ದರ್ಶನದಲ್ಲಿ ಹರ ಜಾತ್ರೆಗೆ ಆಹ್ವಾನ ನೀಡಿ ಶ್ರೀಗಳು ಮಾತನಾಡಿದರು.
ಮಕ್ಕಳಿಗೆ ಜನ್ಮ ಕೊಡುವುದು ಮುಖ್ಯವಲ್ಲ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ನೀರು, ಗಾಳಿ ಸಿಗುತ್ತದೆಯೇ ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಲಿಯೋ, ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ಕಾಡುತ್ತವೆ. ಇವುಗಳಿಗೆ ಯಾವುದೇ ರೀತಿ ಔಷಧಿ ಇರುವುದಿಲ್ಲ, ಆದರೆ ನಾವು ಬಳಸುವ ವಾತಾವರಣ, ಆಹಾರ, ನೀರು, ಹಾಲು ಬಹಳ ಪರಿಶುದ್ಧವಾಗಿರಬೇಕು. ಇಂದು ನಾವು ತೆಗೆದುಕೊಳ್ಳುವ ಆಹಾರ, ನೀರು ಕಲುಷಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನದಿಗಳು ಈ ದೇಶದ ಜೀವನಾಡಿಗಳು, ನೆಲ ಮತ್ತು ಜೀವಸಂಕುಲ ನದಿಗಳನ್ನು ಅವಲಂಬಿತವಾಗಿಯೇ ಉಸಿರಾಡುತ್ತಿವೆ. ಗಂಗಾನದಿ ಹಿಂದಿಗಿಂತ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ. ಅದರಂತೆ ನಮ್ಮ ತುಂಗಭದ್ರಾ ನದಿಯನ್ನೂ ಸಹ ಸ್ವಚ್ಛ ಮಾಡಬಾರದ್ಯಾಕೆ ಎನ್ನುವ ಆಲೋಚನೆಯಿಂದ ಹರಿಹರದ ನದಿ ಪಾತ್ರದಲ್ಲಿ ಭಕ್ತರೊಂದಿಗೆ ಸ್ವಚ್ಛಗೊಳಿಸುವ ಕೆಲಸವನ್ನು ಶ್ರೀಗಳು ಮಾಡಿದ್ದು ಇದನ್ನು ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ನದಿ, ಪರಿಸರವನ್ನು ಸ್ವಚ್ವವಾಗಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಿಗೆ, ಭಕ್ತರಿಗೆ ಕರೆ ನೀಡಿದರು.
ಇದೇ ದಿನಾಂಕ 14 – 15ರಂದು ಎರಡು ದಿನಗಳು ಹರಿಹರದ ಪೀಠದಲ್ಲಿ ಹರಜಾತ್ರೆ ನಡೆಯಲಿದ್ದು, ಸ್ವಾವಲಂಬಿ ಭಾರತ, ಕೃಷಿ, ಯುವಜನ, ಮಹಿಳೆಯರ ಕುರಿತು ಸಮಾವೇಶಕ್ಕೆ ನಾಡಿನ ವಿವಿಧ ತಪಸ್ವಿಗಳು, ಗಣ್ಯರು, ಜ್ಞಾನಿಗಳು ಆಗಮಿಸಲಿದ್ದು ತಾವುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಾತ್ರೆಗೆ ಭಕ್ತರಿಗೆ ಆಹ್ವಾನ ನೀಡಿದರು
ತಾಲ್ಲೂಕಿನ ನಿಟ್ಟೂರು, ತಾವರಗುಂದಿ, ಹಲುವಾಗಲು, ಅರಸನಾಳು, ಐ.ಬೇವಿನಹಳ್ಳಿ, ಹಾರಕನಾಳು, ಗೌರಿಹಳ್ಳಿ, ನೀಲಗುಂದ ಗ್ರಾಮಗಳಿಗೆ ತೆರಳಿ ಹರಜಾತ್ರೆಗೆ ಬರುವಂತೆ ಭಕ್ತರಿಗೆ ಆಹ್ವಾನಿಸಿದರು.
ಕಡತಿ ಗ್ರಾಮದ ಅರಣ್ಯ ಸೇವಾ ಸಮಿತಿ ಸದಸ್ಯರು ವಚನಾನಂದ ಶ್ರೀಗಳಿಗೆ ಸಸಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌಡ್ರ ಮಂಜುಳಾ ಜಗದೀಶ್, ಲಕ್ಷ್ಮೀಪುರ ಪಂಚಾಯಿತಿ ಸದಸ್ಯ ಪಿ.ಟಿ.ಭರತ್, ಪಂಚಮಸಾಲಿ ಸಮಾಜದ ತಾಲ್ಲೂಕು ಖಜಾಂಚಿ ಶಶಿಧರ ಪೂಜಾರ, ವಕೀಲ ಪ್ರಕಾಶ್ ಪಾಟೀಲ್, ವಿರುಪಾಕ್ಷಪ್ಪ, ಚಂದ್ರಶೇಖರ್ ಪೂಜಾರ, ಯುವ ಘಟಕದ ಅಧ್ಯಕ್ಷ ಮಹೇಶ್ ಪೂಜಾರ, ಬೇಲೂರು ಸಿದ್ದೇಶ್, ಬಸವರಾಜ ಮುಲಾಲಿ, ಕೊಟ್ರೇಶ್ ಶ್ಯಾನಭೋಗ್, ಸುರೇಶ್, ಚನ್ನನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.