ಬಿಎಸ್‌ವೈ ಬದಲಾವಣೆ ಹೇಳಿಕೆಗಳಿಗೆ ತೆರೆ

ಮುಜುಗರ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಎಚ್ಚರಿಕೆ

ಶಿವಮೊಗ್ಗ, ಡಿ. 3 – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಹೇಳಿಕೆಗಳಿಗೆ ತೆರೆ ಎಳೆಯಲು ಬಿಜೆಪಿ ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಮುಖಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ಪಕ್ಷದ ಮುಖಂಡರೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ತರುತ್ತಿದ್ದಾರೆ ಎಂದು ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಪಕ್ಷದ ಪ್ರಮುಖರಿಗೆ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ‌ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾನು ಹೈಕಮಾಂಡ್‌ ಸೂಚನೆಯಂತೆ ನಡೆದುಕೊಂಡಿರುವೆ. ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೆನಪು ಮಾಡಿಕೊಳ್ಳುತ್ತೇನೆ. ಅವರ ಆಯುಷ್ಯ, ಆರೋಗ್ಯಕ್ಕೆ ಬೇಡಿಕೊಳ್ಳುವೆ. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಲು ಬಿಡಿ ಎಂದು ಕೇಳಿದ್ದಾರೆ.

ಯಡಿಯೂರಪ್ಪ ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ ಮುಖಂಡರು ಮುಖ್ಯಮಂತ್ರಿ ಬದಲಾವಣೆ, ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಚರ್ಚೆ ಅನಗತ್ಯ. ಪಕ್ಷದ ಶಾಸಕರಲ್ಲಿ ಅಸಮಧಾನ ಮೂಡದಂತೆ ಕಾರ್ಯನಿರ್ವಹಿಸಬೇಕು. ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅರುಣ್‌ ಸಿಂಗ್ ಸಲಹೆ ನೀಡಿದ್ದಾರೆ.

ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅಗತ್ಯ ಕಾರ್ಯತಂತ್ರ ರೂಪಿಸುವುದು. ಗ್ರಾಮೀಣ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ ಹಾಗೂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!