ಹರಪನಹಳ್ಳಿ, ಮಾ.11- ರಾಜ್ಯದ ಮುಜರಾಯಿ ಇಲಾಖೆಯಡಿ ‘ಎ’ ಗ್ರೇಡ್ ನಲ್ಲಿರುವ 205 ದೇವಸ್ಥಾನಗಳ ಪೈಕಿ ಪ್ರಧಾನಿ ಮೋದೀಜಿ ಅವರ ಕನಸಿನಂತೆ ಮೊದಲ ಹಂತದಲ್ಲಿ ಉಚ್ಚೆಂಗೆಮ್ಮ ದೇವಸ್ಥಾನ ಸೇರಿದಂತೆ, 25 ದೇವಸ್ಥಾನಗಳನ್ನು 1140 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದು ಮುಜರಾಯಿ ಇಲಾಖೆಯ ರಾಜ್ಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಉತ್ಸವಾಂಭ ದೇವಿಯ ಹಿರೇಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ಗಂಧರ್ವ ಇವೆಂಟ್ಸ್ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತವು ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮ, ಪೌರಾಣಿಕ ಇತಿಹಾಸ ಹೊಂದಿರುವ ಪುಣ್ಯಭೂಮಿ. ಗ್ರಾಮೀಣ ಭಾಗಗಳ ಜನರು ಈಗಲೂ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, ದೇವಸ್ಥಾನಗಳಲ್ಲಿ ಪೂಜ್ಯನೀಯ ಭಾವನೆ ಹೊಂದಿದ್ದಾರೆ. ಕೋಟಿ ಹಣ ಕೊಟ್ಟರೂ ಸಿಗದ ಶಾಂತಿ, ನೆಮ್ಮದಿ ದೇವಸ್ಥಾನಗಳಲ್ಲಿ ದೊರೆಯುತ್ತಿದೆ ಎಂದು ಸಚಿವೆ ಜೊಲ್ಲೆ ನುಡಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಉತ್ಸವಾಂಬ ದೇವಿಯ ಸನ್ನಿಧಿಗೆ ಶಶಿಕಲಾ ಜೊಲ್ಲೆಯವರ ಆಗಮನ ಸಂತಸ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ರಾಷ್ಟ್ರೀಯ ಜಲ ನಿಗಮದಿಂದ 2.4 ಟಿಎಂಸಿ ಮಾನ್ಯತೆ ಕೊಡಿಸಿದ ಸಂಸದ ಸಿದ್ದೇಶ್ ಅವರು ನಮಗೆ ಸ್ಫೂರ್ತಿ ಆಗಿದ್ದಾರೆ.
ಶಕ್ತಿ ದೇವತೆ ಉಚ್ಚಂಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರಿಗಾಗಿ 1ಕೋಟಿ ಹಾಗೂ ಹಾಲಮ್ಮನ ತೋಪಿನ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ 2 ಕೋಟಿ ಅನುದಾನ ನೀಡಲಾಗಿದೆ ಎಂದರು.
ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ, ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಉದ್ಘಾಟನೆಯನ್ನು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಜಲ ನಿಗಮದ ಅನುಮೋದನೆ ಪಡೆದಿದ್ದು. ಏಪ್ರಿಲ್ ತಿಂಗಳಲ್ಲಿ ಜಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಪವಿಭಾಗಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ, ಡಿವೈಎಸ್‍ಪಿ ಹಾಲಮೂರ್ತಿರಾವ್, ಗಾಯತ್ರಿ ಸಿದ್ದೇಶ್ವರ್, ಇಂದಿರಾ ರಾಮಚಂದ್ರ, ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಗಳೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟಿ ಮಹೇಶ್, ಗ್ರಾ.ಪಂ ಅಧ್ಯಕ್ಷರಾದ ಸಾಕಮ್ಮ, ಉಪಾಧ್ಯಕ್ಷೆ ಕಾಳಮ್ಮ, ಮುಖಂಡರಾದ ಕೆಂಚನಗೌಡ್ರು, ಸೊಕ್ಕೆ ನಾಗರಾಜ್, ವೈ.ಡಿ.ಅಣ್ಣಪ್ಪ, ಯಶವಂತರಾವ್ ಜಾಧವ್, ಜೆ.ಎಂ. ಗೋಪಿನಾಯ್ಕ, ಹನುಮಂತಪ್ಪ, ಕೆಂಚಪ್ಪ, ಸಿದ್ದಪ್ಪ, ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ವಿಜೇಂದ್ರ ಸಿಂಹ, ಕರಡಿ ದುರ್ಗದ ಚೌಡಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.