ರಾಜ್ಯದ ಮೂರು ಕಾಯ್ದೆಗಳ ವಾಪಸ್, ಬೆಳೆಗಳಿಗೆ ಬೆಲೆ

ಜನಜಾಗೃತಿ ಜಾಥಾದಲ್ಲಿ ಎಸ್.ಆರ್. ಹಿರೇಮಠ ಆಗ್ರಹ

ದಾವಣಗೆರೆ, ಮಾ. 11 – ಉಳುವವನೇ ಒಡೆಯ ಎಂಬುದನ್ನು ಬದಲಿಸಿ, ಉಳ್ಳವನೇ ಒಡೆಯ ಎಂದು ಮಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಸೇರಿದಂತೆ, ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಹಾಗೂ ಎಲ್ಲ ಬೆಳೆಗಳಿಗೆ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ, 2023ರಲ್ಲಿ ಜನರಿಂದ §ಬ್ರಹ್ಮಾಸ್ತ್ರ¬ ಎದುರಾಗಲಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ್ ಎಚ್ಚರಿಸಿದ್ದಾರೆ.

ಜನಾಂದೋಲನ ಮಹಾಮೈತ್ರಿಯ ಜನಜಾಗೃತಿ ಜಾಥಾದ ಅಂಗವಾಗಿ ಬಸವ ಕಲ್ಯಾಣದಿಂದ ಬೆಂಗಳೂರಿಗೆ ಕೈಗೊಳ್ಳಲಾಗುತ್ತಿರುವ ಜಾಥಾ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಯದೇವ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯಿದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆ 2020 ವಾಪಸ್ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು. ಇದಕ್ಕಾಗಿ ಪ್ರತಿ ಗ್ರಾಮ ಸಭೆಗಳಲ್ಲಿ ಠರಾವು ಜಾರಿಗೊಳಿಸಿ ಅದನ್ನು ಮುಖ್ಯಮಂತ್ರಿಗೆ ಕಳಿಸಬೇಕು. ಈ ಬಗ್ಗೆ ಶಾಸಕರ ಮೇಲೂ ಒತ್ತಡ ಹೇರಬೇಕು ಎಂದು ಹಿರೇಮಠ್ ಕರೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳು, ದೊಡ್ಡ ಕಂಪನಿಗಳಿಗೆ ನೆರವಾಗಲು ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಜನರು ಜಾಗೃತರಾಗಬೇಕು. ಕಾಯ್ದೆಗಳನ್ನು ವಾಪಸ್ ಪಡೆಯದೇ ಹೋದರೆ 2023ರಲ್ಲಿ ಬ್ರಹ್ಮಾಸ್ತ್ರ ಬಿಡಬೇಕು ಎಂದರು. ಪರೋಕ್ಷವಾಗಿ ಅವರು ವಿಧಾನಸಭಾ ಚುನಾವಣೆ ಕುರಿತು ಪ್ರಸ್ತಾಪಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜನಸಂಗ್ರಾಮ ಪರಿಷತ್‌ನ ಶಿವನಕೆರೆ ಬಸವಲಿಂಗಪ್ಪ, ರಾಜ್ಯ ಸರ್ಕಾರದಲ್ಲಿ ಶೇ.40ರ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಈಗ ಯುದ್ಧದಂತೆ ರಾಜ್ಯಕ್ಕೆ ಹಾನಿ ತರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಬಲ್ಲೂರು ರವಿಕುಮಾರ್, ಹೊನ್ನೂರು ಮುನಿಯಪ್ಪ, ಆವರಗೆರೆ ರಂಗನಾಥ, ಅನೀಸ್ ಪಾಷ, ಹೆಚ್. ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!