ಹರಿಹರ : ಊರಮ್ಮ ದೇವಿ ಹಬ್ಬಕ್ಕೆ ಚುರುಕಾದ ಕುರಿ ಸಂತೆ

ಹರಿಹರ, ಮಾ. 10 – ನಗರದ ಇದೇ ದಿನಾಂಕ 22 ರಿಂದ 26 ರವರಿಗೆ ನಡೆಯುವ ಕಸಬಾ ಮತ್ತು ಮಾಜೇನಹಳ್ಳಿ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆಗೆ ಸಾರ್ವಜನಿಕರು ಮುಂದಾಗಿದ್ದು, ಹಬ್ಬದ ಆಚರಣೆಗೆ ಮಂಗಳವಾರ ಕುರಿ ಸಂತೆಯಲ್ಲಿ ಕುರಿ ಖರೀದಿಗೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ,  ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆದಿದೆ.

66 ಹಳ್ಳಿಗಳ ಒಡತಿ ಶ್ರೀ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬವನ್ನು ಇದೇ ದಿನಾಂಕ 22 ರಿಂದ 26 ರವರಿಗೆ ಅದ್ಧೂರಿಯಾಗಿ ಆಚರಣೆಗೆ ಉತ್ಸವ ಸಮಿತಿಯ ವತಿಯಿಂದ ಎಲ್ಲಾ ರೀತಿಯ ಸಿದ್ದತೆ ಜೋರಾಗಿ ನಡೆಯುತ್ತಿದೆ.

ಕಳೆದ ಹಲವು ವರ್ಷದಿಂದ ಕೊರೊನ ರೋಗವು ಬಂದಾಗಿನಿಂದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದರು ಸಹ, ಹಬ್ಬದ ಆಚರಣೆಯಲ್ಲಿ ಜನರಿಗೆ ಉತ್ಸಾಹವೇನು ಕಡಿಮೆಯಾದಂತೆ ಕಾಣುತ್ತಿಲ್ಲ. ಹಿಂದಿನಿಂದಲೂ ಹಿರಿಯರು ಮಾಡಿಕೊಂಡು ಬಂದಿರುವ ಸಂಪ್ರದಾಯಯಕ್ಕೆ ಚ್ಯುತಿ ಆಗಬಾರದೆಂದು, ದೇವರಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ

ಸಾರ್ವಜನಿಕರು ತಮ್ಮ ನೆಂಟರಿಷ್ಟರು, ಗೆಳೆಯರಿಗೆ, ಬಂಧುಗಳಿಗೆ ಮತ್ತು ಸಂಬಂಧಿ ಕರಿಗೆ ಜೊತೆಗೆ ಅಭಿಮಾನಿಗಳಿಗೆ ಹಬ್ಬಕ್ಕೆ ಆಹ್ವಾನಿಸುವುದು ವಾಡಿಕೆ. ಆಗಮಿಸಿದವರಿಗೆ ಹೋಳಿಗೆ, ಬೂಂದಿ, ಜಿಲೇಬಿ, ಸಿಹಿ ಊಟ ಮಾಡಿದರೆ, ಇನ್ನೂ ಕೆಲವೊಂದು ಧರ್ಮದಲ್ಲಿ ಪ್ರಮುಖವಾಗಿ ಕುರಿ, ಕೋಳಿ, ಮೇಕೆ ಊಟಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ. ಆಗಾಗಿ ನಿನ್ನ ನಡೆದ ಕುರಿ, ಕೋಳಿ ಸಂತೆಯಲ್ಲಿ ಸಾರ್ವಜನಿಕರು ಕುರಿ ಮತ್ತು ಕೋಳಿ ಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮುಗಿ ಬಿದ್ದದ್ದು ಕಂಡುಬಂದಿತು.

ಕುರಿ ಮಾರುಕಟ್ಟೆಯಲ್ಲಿ ಜವಾರಿ ಕುರಿ, ನಾಟಿ ತಳಿಗಳ ಕುರಿ, ಬನ್ನೂರು ಕುರಿ, ಉಡ್ಡಿ ಕಾಳಗದ ಕುರಿಗಳಿಗೆ ಬೇಡಿಕೆಯ ಪ್ರಮಾಣವು ಹೆಚ್ಚಾಗಿರು ವುದು ಕಂಡುಬಂದಿತು. ಮಾರುಕಟ್ಟೆಯಲ್ಲಿ ಜವಾರಿ ಕುರಿ, ನಾಟಿ ತಳಿಯ ಕುರಿ ಬನ್ನುರು ಕುರಿಗಳ ದರವು ಸುಮಾರು 10 ಸಾವಿರದಿಂದ 40 ಸಾವಿರ ರೂಪಾಯಿವರೆಗೆ ನಡೆದರೆ, ಕಾಳಗದ ಕುರಿಗಳಿಗೆ 60 ಸಾವಿರದಿಂದ 1 ಲಕ್ಷ ರೂಪಾಯಿ ದರವನ್ನು ಕೊಟ್ಟು ಕೊಂಡು ಕೊಳ್ಳುತ್ತಿದ್ದರು‌. ಇನ್ನೂ ಮೇಕೆ ವ್ಯಾಪಾರ15 ರಿಂದ 30 ಸಾವಿರದವರೆಗೂ ನಡೆದು, ಕೋಳಿ ವ್ಯಾಪಾರ ಸಹ 200 ರೂ.ಗಳಿಂದ 1 ಸಾವಿರ ರೂ.ಗಳ ವಹಿವಾಟು ನಡೆಯಿತು.

error: Content is protected !!