ದಾವಣಗೆರೆ, ಮಾ. 10 – ನಾಳೆ ಮಾ. 12ರ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು §ಕಂದಾಯ ದಾಖಲೆ ಮನೆ ಬಾಗಿಲಿಗೆ¬ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ. ಕಂದಾಯ ದಾಖಲೆಗಳನ್ನು ಸಂಬಂಧಿಸಿದ ಎಲ್ಲರ ಮನೆಗಳಿಗೆ ತಲುಪಿಸುವುದು ಯೋಜನೆಯ ಉದ್ದೇಶ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುವ ಮೂಲ ದಾಖಲೆಗಳಾದ ಪಹಣಿ, ಆದಾಯ/ಜಾತಿ ಪ್ರಮಾಣ ಪತ್ರ ಮತ್ತು ಅಟ್ಲಾಸ್‌ಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವುದು ಈ ಯೋಜನೆಯ ಉದ್ದೇಶ ಎಂದವರು ಹೇಳಿದ್ದಾರೆ.
ಈ ಯೋಜನೆಯಡಿ ಜಿಲ್ಲೆಯ 1.35 ಲಕ್ಷ ರೈತ ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನು ನೀಡಲಾಗುವುದು. 2.93 ಲಕ್ಷ ಪಹಣಿ, 3.23 ಲಕ್ಷ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, 93 ಸಾವಿರ ಅಟ್ಲಾಸ್ ಸೇರಿದಂತೆ 7.10 ಲಕ್ಷ ದಾಖಲೆಗಳನ್ನು ವಿತರಿಸಲಾಗುವುದು ಎಂದವರು ಹೇಳಿದ್ದಾರೆ.
ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮವೊಂದರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕರೂ ಸಹ ತಮ್ಮ ಕ್ಷೇತ್ರಗಳಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಅದೇ ದಿನದಂದು ಪತ್ರಗಳನ್ನು ಪಡೆಯಲು ಸಾಧ್ಯವಾಗದಿದ್ದವರು, ಮಾ.21ರಿಂದ 26ರ ನಡುವಿನ ವಾರದಲ್ಲಿ ನಾಡಕಚೇರಿಯಲ್ಲಿ ಉಚಿತವಾಗಿ ಪತ್ರಗಳನ್ನು ಪಡೆಯಬಹುದು ಎಂದು ಹೇಳಿದರು.
ತಹಶೀಲ್ದಾರರು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕ ಸಿಬ್ಬಂದಿಗಳ ಮೂಲಕ ದಾಖಲೆಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಅಡುಗೆ ಎಣ್ಣೆ ಬಗ್ಗೆ ಕ್ರಮ : ಅಡುಗೆ ಎಣ್ಣೆ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸಲಾಗುತ್ತಿದೆ ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳು ಗೋದಾಮುಗಳ ತಪಾಸಣೆ ನಡೆಸುವಂತೆ ಇಂದೇ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಉಕ್ರೇನ್‌ನಲ್ಲಿ ಜಿಲ್ಲೆಯ ಯಾರೂ ಇಲ್ಲ : ಉಕ್ರೇನ್‌ನಲ್ಲಿ ಜಿಲ್ಲೆಯ 11 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಇವರಲ್ಲಿ ಒಂಭತ್ತು ಜನ ವಾಪಸ್ ಬಂದಿದ್ದಾರೆ. ಇನ್ನಿಬ್ಬರು ಬರುವ ಹಾದಿಯಲ್ಲಿದ್ದಾರೆ. ಈಗ ಉಕ್ರೇನ್‌ನಲ್ಲಿ ಜಿಲ್ಲೆಯ ಯಾರೂ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಾ.17ರಿಂದ ಜನಸ್ಪಂದನ : ಕೊರೊನಾ ನಂತರ ಸ್ಥಗಿತಗೊಳಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಮಾ.17ರಿಂದ ಪುನರಾರಂಭಿಸಲಾಗುವುದು. ಹದಿನೈದು ದಿನಗಳಿಗೊಮ್ಮೆ ಜನಸ್ಪಂದನ ನಡೆಯಲಿದೆ. ಅರ್ಜಿಗಳ ವಿಲೇವಾರಿ ಬಗ್ಗೆ ನಿರಂತರ ಪರಿಶೀಲನೆ ಮಾಡಲಾಗುವುದು ಎಂದು ಬೀಳಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ ಉಪಸ್ಥಿತರಿದ್ದರು.
ಬೀದಿ ವ್ಯಾಪಾರಿಗಳು ಸಾಲ ಮರು ಪಾವತಿಸಲು ಕರೆ
ವ್ಯಾಪಾರಿಗಳಿಗೆ ಸಾಲ ನೀಡಲು ವಿಶೇಷ ಅಭಿಯಾನ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಜಿಲ್ಲೆಯ 5,289 ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ವಿತರಣೆ ಮಾಡಲಾಗಿದೆ. ಆದರೆ, ಸಾಲ ಪಡೆದ ಸಾಕಷ್ಟು ಜನರು ಮರು ಪಾವತಿ ಮಾಡಿಲ್ಲ. ಮರು ಪಾವತಿ ಮಾಡದೇ ಇದ್ದರೆ, ಅದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಿ, ಮುಂದಿನ ಬಾರಿ ಸಾಲ ಪಡೆಯುವಾಗ ತೊಡಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಸಾಲ ಮರು ಪಾವತಿ ಮಾಡಿದವರು ಮುಂದಿನ ಹಂತದಲ್ಲಿ 20 ಸಾವಿರ ರೂ., ಆನಂತರದಲ್ಲಿ ಇನ್ನೂ ಹೆಚ್ಚು ಸಾಲ ಪಡೆಯಲು ಅವಕಾಶ ಇದೆ. ಹೀಗಾಗಿ ಸಾಲ ಮರು ಪಾವತಿ ಮಾಡಬೇಕು ಎಂದವರು ತಿಳಿಸಿದರು.
ಬೀದಿ ವ್ಯಾಪಾರಿಗಳಿಗೆ 7,289 ಜನರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 6,072 ಜನರಿಗೆ ಮಂಜೂರಾಗಿದ್ದು, 5,289 ಜನ ಸಾಲ ಪಡೆದಿದ್ದಾರೆ. ಜಿಲ್ಲೆಯ ಉಳಿದ ಉಳಿದ ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲು ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.