ಮಲೇಬೆನ್ನೂರು, ಮಾ.10- ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಕುಣಿಬೆಳಕೆರೆ, ನಂದಿತಾವರೆ, ಎಕ್ಕೆಗೊಂದಿ, ಭಾನುವಳ್ಳಿ ಗ್ರಾಮಗಳ ರೈತರಿಗೆ ನೀರು ತಲುಪಿಸುವ ಕಾಲುವೆ ಸ್ವಚ್ಛಗೊಳಿಸುವ ಕಾಮಗಾರಿಗೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಶುಕ್ರವಾರ ಚಾಲನೆ ನೀಡಿದರು.
ಕಳೆದ 8-10 ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ಈ ಕಾಲುವೆಯನ್ನು ಸ್ವಚ್ಛ ಮಾಡಿಸುವಂತೆ ಈ ಭಾಗದ ರೈತರು ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ಕಾಮಗಾರಿ ಆಗಿರಲಿಲ್ಲ. ರೈತರ ಮನವಿ ಮೇರೆಗೆ ನನ್ನ ಸ್ವಂತ ಹಣದಲ್ಲಿ ಸುಮಾರು 5 ಕಿ.ಮೀ ಕಾಲುವೆಯ ಹೂಳು ತೆಗೆಸಲು ಈ ದಿನ ನಂದಿತಾವರೆಯಲ್ಲಿ ರೈತರ ಸಮ್ಮುಖದಲ್ಲಿ ಚಾಲನೆ ನೀಡಿದ್ದೇನೆಂದು ಚಂದ್ರಶೇಖರ್ ಪೂಜಾರ್ ತಿಳಿಸಿದರು.
ಕಾಲುವೆ ಹೂಳು ತೆಗೆಸುವಂತೆ ನಾನೂ ಸಹ ನೀರಾವರಿ ಇಲಾಖೆಯ ಇಂಜಿನಿಯರ್ ಜೊತೆ ಮಾತನಾಡಿದ್ದೆ. ಅನುದಾನ ಕೊರತೆಯಿಂದಾಗಿ ತಕ್ಷಣವೇ ಈ ಕೆಲಸ ಆಗಲ್ಲ ಎಂದು ಹೇಳಿದರು.
ಈಗಾಗಲೇ ನಾಟಿ ಮಾಡಿರುವ ಈ ಭಾಗದ ರೈತರಿಗೆ ಬೇಸಿಗೆ ಕಾಲ ಆಗಿರುವುದರಿಂದ ನೀರು ಬಹಳ ಮುಖ್ಯವಾಗಿರುವುದರಿಂದ 3 ಲಕ್ಷ ರೂ. ವೆಚ್ಚದಲ್ಲಿ ಇಟಾಚಿಯಿಂದ ಕಾಮಗಾರಿ ಮಾಡಿಸಲು ತೀರ್ಮಾನಿಸಿ, ಕಾಮಗಾರಿ ಆರಂಭಿಸಿದ್ದೇನೆಂದು ಚಂದ್ರಶೇಖರ್ ಪೂಜಾರ್ ವಿವರಿಸಿದರು.
ನಂದಿತಾವರೆಯ ಎನ್.ಪಿ.ಬಸಲಿಂಗಪ್ಪ, ವೈ.ಸುರೇಶ್, ವೈ.ಸಂತೋಷ್, ಗದಿಗೆಪ್ಪ, ಹರೀಶ್, ಸುರೇಶ್, ಎಕ್ಕೆಗೊಂದಿಯ ಚಂದ್ರಪ್ಪ, ಜೆಸಿಬಿ ಸುರೇಶ್ ಸೇರಿದಂತೆ ಭಾನುವಳ್ಳಿ, ಎಕ್ಕೆಗೊಂದಿ, ನಂದಿತಾವರೆ, ಕುಣೆಬೆಳಕೆರೆ ರೈತರು ಈ ವೇಳೆ ಹಾಜರಿದ್ದು, ಪೂಜಾರ್ ಅವರನ್ನು ಅಭಿನಂದಿಸಿದರು.