ಭದ್ರಾ ನೀರಾವರಿ ಯೋಜನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ: ಶಾಸಕ ರಾಮಚಂದ್ರ
ಜಗಳೂರು, ಮಾ. 10- ಭದ್ರಾಮೇಲ್ದಂಡೆ ಯೋಜನೆ ಹಾಗೂ 57 ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಏಪ್ರಿಲ್ 11 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರುಗಳು ಆಗಮಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ಸೂಚಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ನಡೆದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
4 ದಶಕಗಳ ಕನಸಿನ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ನಿರಂತರ ಹೊರಾಟ ನಡೆಸಿದ್ದರೂ, ಆಡಳಿತ ಸರ್ಕಾರಗಳ ಬದಲಾವಣೆಯಿಂದ ನೆನೆಗುದಿಗೆ ಬಿದ್ದಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತಾವಧಿ ಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಸಹಕಾರದಿಂದ ಯೋಜನೆ ಕೈಗೆತ್ತಿಕೊಳ್ಳ ಲಾಯಿತು. ನಂತರ ಕಾತ್ರಾಳು ಮಾರ್ಗಗೊಂದಲ ಸೃಷ್ಠಿಯಾಗಿತ್ತು ಹರಸಾಹಸದೊಂದಿಗೆ ಮೂಲ ಮಾರ್ಗ ಸಂಗೇನಹಳ್ಳಿ ಮಾರ್ಗ ನಿಗದಿಯಾಗಿದ್ದು, ಯೋಜನೆ ಅಂತಿಮ ಹಂತ ಕ್ಕೆ ಬಂದಿದೆ ಎಂದು ಹೇಳಿದರು.
ರಾಜ್ಯದ ಮೊದಲ ರಾಷ್ಟ್ರೀಯ ಯೋಜನೆ ಯಾಗಿ ಕೇಂದ್ರ ಸರಕಾರ ಅನುಮೋದನೆಗೊಳಿಸಿದ ಫಲವಾಗಿ ಇದೀಗ 70:30ರ ಅನುಪಾತದಲ್ಲಿ ಅನುದಾನ ಬಿಡುಗಡೆಯಾಗಿ ಎರಡು ವರ್ಷಗಳಲ್ಲಿ ತಾಲೂಕಿಗೆ ಭದ್ರೆ ಹರಿಯಲಿದ್ದಾಳೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ 660 ಕೋಟಿ ರೂ.ಯೋಜನೆ ಪೈಪ್ ಲೈನ್ ಕಾಮಗಾರಿ ದೀಟೂರಿನಿಂದ ಚಟ್ನಹಳ್ಳಿ ಗುಡ್ಡದವರೆಗೆ ಮುಕ್ತಾಯದ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ತುಪ್ಪದಹಳ್ಳಿ ಕೆರೆಗೆ ನೀರು ಹರಿಯಲಿದೆ ಎಂದರು.
ಕೈಗಾರಿಕೆ ಪ್ರದೇಶ ಅಭಿವೃದ್ಧಿ ಯೋಜನೆ, 4 ಎಕರೆ ಪ್ರದೇಶದಲ್ಲಿ ಕೆಎಸ್‌ಆರ್ ಟಿಸಿ ಡಿಪೋಗೆ 2 ಕೋಟಿ ರೂ. ಬಿಡುಗಡೆಯಾಗಿದ್ದು, ಗುದ್ದಲಿ ಪೂಜೆ ಹಾಗೂ ಪ್ರವಾಸಿ ಮಂದಿರದ ನೂತನ ಕಟ್ಟಡ ಹಾಗೂ ಮೂರು ಕೋಟಿ ರೂ. ವೆಚ್ಚದ ಪಟ್ಟಣ ಪಂಚಾಯ್ತಿ ನೂತನ ಕಟ್ಟಡ ಸೇರಿದಂತೆ ಕ್ಷೇತ್ರದ ನೂರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಶಾಸಕರು ವಿವಿಧ ಇಲಾಖೆಗಳ ಅಧಕಾರಿಗಳಿಂದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆಯಡಿ 4.5 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ 80 ಲಕ್ಷ ರೂ. ವೆಚ್ಚದಲ್ಲಿ 14 ಜನ ಫಲಾನುಭವಿಗಳಿಗೆ ಅರಣ್ಯ ಇಲಾಖೆಯಿಂದ ಜಮೀನು ವಿತರಣೆ, ಪಂಚಾಯತ್ ರಾಜ್ ಇಲಾಖೆಯಡಿ 10 ಕಾಮಗಾರಿಗಳಿಗೆ ಅಡಿಗಲ್ಲು, 15 ಕೋಟಿ ರೂ. ವೆಚ್ಚದಲ್ಲಿ 5 ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಚಾಲನೆ, ಕೆಐಆರ್ ಡಿಎಲ್ ನ ಕೊಡದಗುಡ್ಡದ ಯಾತ್ರಿ ನಿವಾಸ ಹಾಗೂ ಕೊಣಚಗಲ್ ಯಾತ್ರಿನಿವಾಸ ಉದ್ಘಾಟನೆ. ಶಿಕ್ಷಣ ಇಲಾಖೆಯ ಹುಚ್ಚಂಗಿಪುರ ಶಾಲೆ 1.5 ಕೋಟಿ ರೂ. ವೆಚ್ಚದಲ್ಲಿ 6 ಕೊಠಡಿಗಳಿಗೆ ಶಂಕುಸ್ಥಾಪನೆ, ಸಾವಿರಕ್ಕೂ ಅಧಿಕ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ, ಜಲಾನಯನ ಇಲಾಖೆಯಿಂದ 5 ಎಕರೆ ಜಮೀನು ಮಂಜೂರು, ತೋಟಗಾರಿಕೆ ಇಲಾಖೆಯಿಂದ 95 ಜನರಿಗೆ ಈರುಳ್ಳಿ ಶೆಡ್ ನಿರ್ಮಿಸಲು ಫಲಾನುಭವಿಗಳಿಗೆ ಅನುದಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ.ಸಿಇಓ ವಿಜಯ್ ಮಹಾಂತೇಶ್ ದಾನಮ್ಮನವರ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಎಚ್ ಓ ಡಾ. ನಾಗರಾಜ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪ.ಪಂ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.