`ಅತ್ತಿ ಹೂವು’ ಪುಸ್ತಕ ಬಿಡುಗಡೆಯಲ್ಲಿ ಶಾಸಕ ಹೆಚ್. ವಿಶ್ವನಾಥ್
ದಾವಣಗೆರೆ, ಮಾ.10- ಗ್ರಾಮ ಪಂಚಾಯ್ತಿಯಿಂದ ಹಿಡಿದು, ಸಂಸತ್ ವರೆಗಿನ ಸದಸ್ಯರೆಲ್ಲರೂ ತಮ್ಮ ಕ್ಷೇತ್ರ ಮತ್ತು ಜೀವನದ ನೈಜತೆಯ ವಸ್ತು ಸ್ಥಿತಿ ಕುರಿತಾದ ಪುಸ್ತಕಗಳನ್ನು ಬರೆಯುವಂತಾಗಬೇಕು. ಅದಕ್ಕೆ ನನ್ನ ಶಾಸಕಾನುದಾನದಲ್ಲಿನ 2 ಕೋಟಿಯ ಹಣದಲ್ಲಿ 50 ಲಕ್ಷ ರೂ.ಗಳನ್ನು ಮೀಸಲಿಡುತ್ತೇನೆ ಎಂದು ವಿಧಾನ ಪರಿಷತ್ ಶಾಸಕ ಹೆಚ್. ವಿಶ್ವನಾಥ್ ಘೋಷಿಸಿದರು.
ನಗರದ ಕುವೆಂಪು ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪ್ರೊ. ಓ. ನಾಗೇಂದ್ರಪ್ಪ ಅವರ ಸ್ನೇಹ ಬಳಗದ ಸಹಯೋಗದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಪ್ರೊ. ಓ. ನಾಗೇಂದ್ರಪ್ಪ ಅವರ `ಅತ್ತಿ ಹೂವು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತದ ಜನತಂತ್ರ ವ್ಯವಸ್ಥೆಯ ಪ್ರಥಮ ಸರ್ಕಾರ ಗ್ರಾಮ ಪಂಚಾಯಿತಿ. ಅಲ್ಲಿ ಎಷ್ಟು ಸ್ವಾತಂತ್ರ್ಯ ಇದೆ, ಅಲ್ಲಿಗೆ ಕೆಲ ಶಾಸಕರೇ ಮಾಲೀಕರಂತೆ ಹೇಗೆ ವರ್ತಿಸು ತ್ತಾರೆ. ಹೀಗೆ ಜನತಂತ್ರ ವ್ಯವಸ್ಥೆಯ ಬಗ್ಗೆಯೂ ಪುಸ್ತಕಗಳನ್ನು ಬರೆಯಬೇಕು, ಅವುಗಳು ಬಿಡುಗಡೆಗೊಂಡು ಜನ ಓದಿ ತಿಳಿಯುವಂತಾಗಬೇಕು ಎಂದು ತಿಳಿಸಿದರು.
ಓದು-ಬರಹ ಜೀವನದಲ್ಲಿ ಬಹಳ ಮುಖ್ಯವಾಗಿದ್ದು, ಇವುಗಳಿಲ್ಲದಿದ್ದರೆ ದೇಶವೂ ಅಲ್ಲ, ನಾಡೂ ಅಲ್ಲ. ದೇಶದಲ್ಲಿ 125 ಕೋಟಿ ಜನರಿದ್ದು, ಅವರುಗಳ ನೂರಾರು ಬದುಕು-ಬವಣೆಗಳಿವೆ, ಕಷ್ಟ-ನಲಿವುಗಳಿವೆ. ಅವುಗಳು ಬರವಣಿಗೆಯ ರೂಪದಲ್ಲಿ ದಾಖಲಾಗಬೇಕು. ಆಗ ಪರಿಸ್ಥಿತಿಯ ಚಿತ್ರಣ ಸಿಗುತ್ತದೆ. ಹಾಗಾಗಿ ನಮ್ಮ ಅನುಭವ ನಮ್ಮ ಸ್ವಂತ ಆಸ್ತಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಬದುಕಿನ ವಸ್ತುಸ್ಥಿತಿ ಬರೆಯಬೇಕು ಎಂದು ತಿಳಿಸಿದರು.
ಜನತಂತ್ರ ವ್ಯವಸ್ಥೆಯ ಪ್ರಜೆ ಎಂದು ಈಗಲೂ ಹೇಳಲಾಗ್ತಿಲ್ಲ
ಪ್ರಸ್ತುತ ದೇಶದಲ್ಲಿ ರಾಜಕಾರಣ, ರಾಜಕೀಯವನ್ನು ಉಂಡು, ಉಸಿರಾಗಿ ಹೊದ್ದು ಮಲಗಿದ್ದರೂ ರಾಜಕೀಯ ಮೈಲಿಗೆಯಿಂದ ನೋಡುವಂತಾಗಿದೆ. ರಾಜಕಾರಣಿ ಅಸ್ಪೃಶ್ಯನಾಗುತ್ತಿದ್ದಾನೆ. ಇಂತಹ ನಕಾರಾತ್ಮಕಕ್ಕೆ ಜನಸಾಮಾನ್ಯರು ಮತ್ತು ಸರ್ಕಾರ ಕಾರಣವಾಗಿದೆ. ಎಲ್ಲಿಯತನಕ ರಾಜಕಾರಣಿ, ರಾಜಕೀಯದಲ್ಲಿ ಸಕಾರಾತ್ಮಕ ಭಾವನೆ ಜನತಂತ್ರ ವ್ಯವಸ್ಥೆಯಲ್ಲಿ ಮೂಡುವುದಿಲ್ಲವೋ ಅಲ್ಲಿಯ ತನಕ ದೇಶದ ಏಳಿಗೆ ಅಸಾಧ್ಯ. ನಕಾರಾತ್ಮಕ ಧೋರಣೆಯ ದೃಷ್ಟಿಕೋನದಿಂದ ಜನಪ್ರತಿನಿಧಿಯನ್ನು ನೋಡಿದಂತೆ ಜನತಂತ್ರ ವ್ಯವಸ್ಥೆಯೂ ಅಂತೆಯೇ ಕಾಣುತ್ತದೆ. ಕೆಲವು ಜನಪ್ರತಿನಿಧಿಗಳಿಗೆ ಯಾವ ಜಾತಿ, ಯಾವ ಪಕ್ಷದಲ್ಲಿದ್ದೇವೆ ಅನ್ನುವುದು ಅರಿವಿದೆ. ಆದರೆ, ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬುವುದು ತಿಳಿದಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಹೇಳಲಾಗದಂತಹ ಸ್ಥಿತಿ ಇದೆ. ಸ್ವತಂತ್ರ ಭಾರತದ ಜನತಂತ್ರ ವ್ಯವಸ್ಥೆಯ ಪ್ರಜೆ ಎಂದು ಈಗಲೂ ಹೇಳಲಾಗುತ್ತಿಲ್ಲ. ಹಿಂದಿನಂತೆ ಜನಶಿಕ್ಷಣ ಇಲ್ಲವಾಗಿದೆ.
– ಹೆಚ್. ವಿಶ್ವನಾಥ್, ಮಾಜಿ ಸಚಿವರು
ನಾನೂ ಸಹ ರಾಜ್ಯ, ದೇಶ, ಅಂತರರಾಷ್ಟ್ರೀಯ ರಾಜಕಾರಣದ ಕುರಿತಾಗಿ, 750 ವರ್ಷಗಳ ಹಿಂದಿನ ಲಂಡನ್ ಪಾರ್ಲಿಮೆಂಟ್ ಕುರಿತಾಗಿ ಒಟ್ಟು 7 ಪುಸ್ತಕಗಳನ್ನು ಬರೆದಿದ್ದೇನೆ. ಪ್ರೊ. ಓ. ನಾಗೇಂದ್ರಪ್ಪ ಅವರು ಬರೆದ ಪುಸ್ತಕದಲ್ಲಿ ತನ್ನ ನಿಜ ಜೀವನದ ಚಿತ್ರಣವನ್ನು ಬಿತ್ತರಿಸಿದ್ದಾರಲ್ಲದೇ, ಜೆ.ಹೆಚ್. ಪಟೇಲ್ ಅವರ ಜನನಾಯಕತ್ವದ ಬಗ್ಗೆಯೂ ತಿಳಿಸಿದ್ದಾರೆ. ಅಲ್ಲದೇ, ಪ್ರಸ್ತುತ ರಾಜಕಾರಣ, ರಾಜಕೀಯ ನಾಯಕತ್ವವು ಸಂಕುಚಿತ, ಸ್ವಜನ ಪಕ್ಷಪಾತದ ಬಗ್ಗೆ, ರಾಜಕಾರಣಿ ಹೇಗೆ ಸಮಯಕ್ಕೆ ತಕ್ಕಂತೆ ಮರಳುತ್ತಾರೆ ಎಂಬುದನ್ನೂ ಮಾರ್ಮಿಕವಾಗಿ ಬರೆದಿದ್ದಾರೆ ಎಂದು ಹೇಳಿದರು.
ಪ್ರಸ್ತುತ ವಿಶ್ವವಿದ್ಯಾನಿಲಯಗಳನ್ನು ಜಾತಿ ಸಂಕೋಲೆಯಲ್ಲಿ ಕಟ್ಟಿಹಾಕಲಾಗಿದೆ. ಅಕ್ಷರ ಸಂಸ್ಕೃತಿ ಹೋಗಿ ಧರ್ಮ-ಜಾತಿ ಸಂಸ್ಕೃತಿ ನೆಲೆಸುತ್ತಿದೆ ಎಂದು ವಿಷಾದಿಸಿದರು.
ಇದೇ ವೇಳೆ ಹೆಚ್. ವಿಶ್ವನಾಥ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿನ ಗ್ರಂಥಾಲಯವನ್ನು ಡಿಜಿಟಲೀಕರಣ ಮುಖೇನ ಈ – ಗ್ರಂಥಾಲಯಕ್ಕೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಚಂದ್ರಶೇಖರ ತಾಳ್ಯ, ಲೇಖಕ ಓ. ನಾಗೇಂದ್ರಪ್ಪ, ಪ್ರೊ. ಎ.ಬಿ. ರಾಮಚಂದ್ರಪ್ಪ, ಡಾ. ದಾದಾಪೀರ್ ನವಿಲೇಹಾಳ್ ವೇದಿಕೆ ಮೇಲಿದ್ದರು. ಜಾನಪದ ತಜ ಎಂ.ಜಿ. ಈಶ್ವರಪ್ಪ, ಹಿರಿಯ ಪತ್ರಕರ್ತ ಬಿ.ಎನ್ ಮಲ್ಲೇಶ್, ನಾ. ಲೋಕೇಶ್ ಒಡೆಯರ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಆರ್. ಉಜ್ಜಿನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ನಿರೂಪಿಸಿದರು. ತಾಲ್ಲೂಕು ಗೌರವ ಕಾರ್ಯ ದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ ವಂದಿಸಿದರು.