ಎಸ್ಟಿ ಮೀಸಲಾತಿ ಹೆಚ್ಚಳ ಮುಂದಾದರೂ ಮಾಡಲೇಬೇಕು, ಅದನ್ನು ಇಂದೇ ಮಾಡಿ, ಸರ್ಕಾರ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲಿ : ಎಸ್ಸೆಸ್
ಬೆಂಗಳೂರು, ಮಾ.9- ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಪೇಕ್ಷೆಯಂತೆ ಬೇಡಿಕೆಗಳನ್ನು ತತ್ಕ್ಷಣವೇ ಈಡೇರಿಸುವಂತೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಆಯೋಗದ ವರದಿ (ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ) ಅನುಷ್ಠಾನಕ್ಕೆ ಒತ್ತಾಯಿಸಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶಿಬಿರಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ಎಸ್ಟಿ ಮೀಸಲಾತಿ ಹೆಚ್ಚಿಸುವುದು ಮುಂದಿನ ದಿನಗಳಲ್ಲಾದರೂ ಮಾಡಲೇಬೇಕು. ಅದನ್ನು ಇಂದೇ ಮಾಡುವುದರ ಮೂಲಕ ಶ್ರೀಗಳ ಮತ್ತು ಸಮಾಜದ ಪ್ರೀತಿ, ವಿಶ್ವಾಸ ಗಳಿಸುವುದರ ಮೂಲಕ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲಿ ಎಂದು ಎಸ್ಸೆಸ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಿವಿಮಾತು ಹೇಳಿದರು. ಶ್ರೀಗಳು 28 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿದ ಅವರು, ಸರ್ಕಾರ ಈ ಕೂಡಲೇ ಕಣ್ಣು ತೆರೆಸಬೇಕು ಎಂದು ಒತ್ತಾಯಿಸಿದರಲ್ಲದೇ, ನಮ್ಮ ಮತ್ತು ನಮ್ಮ ಸಮಾಜದ ಸಂಪೂರ್ಣ ಬೆಂಬಲ ಶ್ರೀಗಳ ಹೋರಾಟಕ್ಕಿದೆ ಎಂದು ಹೇಳುವುದರೊಂದಿಗೆ ಸ್ವಾಮೀಜಿಯವರ ಹೋರಾಟಕ್ಕೆ ಬಲ ನೀಡಿದರು.
ನಂತರ ಮಾತನಾಡಿದ ವಾಲ್ಮೀಕಿ ಶ್ರೀಗಳು, ನಮ್ಮ ಅಜ್ಜ (ಎಸ್ಸೆಸ್) ನವರು ಇಲ್ಲಿಗೆ ಬಂದು ಬೆಂಬಲ ನೀಡಿದ್ದಾರೆಂದರೆ ಸರ್ಕಾರ ಕಣ್ಣು ತೆರೆಸುವ ವಿಶ್ವಾಸ ತಮಗಿದೆ ಎಂದರಲ್ಲದೇ, ಎಸ್ಸೆಸ್ ಅವರು ದೈತ್ಯ ಶಕ್ತಿ ಇದ್ದಂತೆ. ಅವರ ಧ್ವನಿಗೆ ಮೋದಿ ಕೂಡಾ ಕಣ್ಣು ತೆರೆಸುತ್ತಾರೆ ಎಂದು ಎಸ್ಸೆಸ್ ಅವರ ಶಕ್ತಿಯನ್ನು ಬಣ್ಣಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲಮನೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲುಮನೆ ಮತ್ತಿತರರು ಎಸ್ಸೆಸ್ ಅವರೊಂದಿಗಿದ್ದರು.