ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರಿಗೆ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಹೆಗ್ಡೆ ಕರೆ
ದಾವಣಗೆರೆ, ಮಾ.8- ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಮಹಿಳೆಯರು ಮುಂದಾಗಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗ್ಡೆ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಅಭಿವೃದ್ಧಿಗಾಗಿ ಪ್ರತಿಭಟಿಸುವ, ಪ್ರಶ್ನಿಸುವ ಹಕ್ಕನ್ನು ಬೆಳೆಸಿಕೊಳ್ಳಬೇಕಾಗಿದೆ. ಶಿಕ್ಷಣದ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು. ಅದರೊಟ್ಟಿಗೆ ತಾರತಮ್ಯ ರಹಿತ ಸಮಾಜ ನಿರ್ಮಾಣವೂ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದರು.
ಮಹಿಳೆಯರ ಪ್ರಗತಿಯಲ್ಲಿ, ಸಮಾಜ ಸುಧಾರಣೆಯಲ್ಲಿ ಪುರುಷರ ಪಾತ್ರವು ಇದೆ. ಅವರನ್ನೂ ನಾವು ಗೌರವದಿಂದ ಕಾಣಬೇಕು. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಸ್ತ್ರೀ ಶೋಷಣೆ, ಲೈಂಗಿಕ ಶೋಷಣೆ ಸೇರಿದಂತೆ ಇನ್ನೂ ಹಲವು ಪಿಡುಗುಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು, ಇದಕ್ಕೆಲ್ಲ ಮಹಿಳೆಯರು ಶಿಕ್ಷಿತರಾಗಿ ಇರುವುದೇ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಎಸ್. ಸದರಜೋಶಿ ಮಾತನಾಡಿ, ಶಿಷ್ಟರಿಗೆ ಲಕ್ಷ್ಮಿಯಾಗಿ ದುಷ್ಟರಿಗೆ ಕಾಳಿಯಾಗಿ ಮಹಿಳೆಯರು ಇರಬೇಕು. ಆ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇದ್ದು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಕರೆ ನೀಡಿದರು.
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ.ಎನ್ ನಂದಿನಿ ಮಾತನಾಡಿ, ಮಹಿಳೆಯರು ಜನ್ಮ ಕೊಟ್ಟ ತಂದೆ ತಾಯಿಗಳಿಗೆ, ಶಿಕ್ಷಣ ನೀಡಿದ ಗುರುಗಳಿಗೆ, ಬದುಕನ್ನು ನೀಡಿದ ಪತಿಯ ಮೇಲೆ ಗೌರವ ಹೊಂದಿರಬೇಕು ಎಂದರು.
`ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ವಿಷಯವಾಗಿ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಎಲ್.ಎಚ್. ಅರುಣ್ ಕುಮಾರ್, ಲಿಂಗ ಸಮಾನತೆ ಎನ್ನುವುದು ಮಹಿ ಳೆಯರ ಸಮಸ್ಯೆಯಲ್ಲ. ಅದೊಂದು ಆರ್ಥಿಕ ಸಮಸ್ಯೆ. ಮಹಿಳೆಯರನ್ನು ಸಶಕ್ತಗೊಳಿಸುವ ಪ್ರಯತ್ನ ಪುರುಷರ ಪತನಕ್ಕಾಗಿ ಅಲ್ಲ ಕುಟುಂಬದ ಏಳಿಗೆಗಾಗಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ.ನಾಗರಾಜ ನಾಯ್ಕ ಮಾತನಾಡಿ, ಮಹಿಳೆ ಕೇವಲ ಕುಟುಂಬದ ಶಕ್ತಿಯಲ್ಲ, ಅವಳು ದೇಶದ, ಸಮಾಜದ ಶಕ್ತಿ. ಸ್ವಾವಲಂಬಿಯಾದರೆ ದೇಶ ಸಂಪದ್ಭರಿತ ವಾಗುತ್ತದೆ. ನೀರು ಇಲ್ಲದ ಊರು ಇಲ್ಲ, ನಾರಿ ಇಲ್ಲದ ಮನೆ ಇಲ್ಲ ಎನ್ನುವಂತೆ, ನಾರಿಯಿದ್ದರೆ ಮನೆ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಜಿಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜ್, ಜಿ.ಸಿ.ನಟರಾಜ್, ಡಾ.ಟಿ.ಹಾಲೇಶಪ್ಪ, ರಚನಾ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.