ವೈದ್ಯನಾಗುವ ಕನಸು ಹೊತ್ತವ ತ್ಯಾಗಿಯಾದ

ಉಕ್ರೇನ್‌ನಲ್ಲಿ ಮಡಿದ ನವೀನ್ ಪೋಷಕರಿಗೆ ಸಿರಿಗೆರೆ ಶ್ರೀಗಳಿಂದ ಸಾಂತ್ವನ

ರಾಣೇಬೆನ್ನೂರು, ಮಾ. 7- ವೈದ್ಯನಾಗುವ ಕನಸು ಹೊತ್ತು, ವಿದೇಶಕ್ಕೆ ತೆರಳಿದ್ದ ನವೀನ್ ಪರೋಪಕಾರ ಮಾಡಲು ಹೋಗಿ ತನ್ನುಸಿರು ಚೆಲ್ಲುವ ಮೂಲಕ ತ್ಯಾಗಜೀವಿ ಎನಿಸಿಕೊಂಡಿದ್ದಾನೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಮಡಿದ ಚಳಗೇರಿಯ ನವೀನ್ ಗ್ಯಾನಗೌಡ್ರ ಪಾಲಕರಿಗೆ ಸಾಂತ್ವನ ಹೇಳಿ, ನವೀನ್ ಆತ್ಮಕ್ಕೆ ಶಾಂತಿ ದೊರಕುವಂತೆ ಪ್ರಾರ್ಥಿಸಿ, ಶ್ರೀಗಳು ಮಾತನಾಡಿದರು.

ಬಿಕ್ಕಟ್ಟು ಪ್ರಾರಂಭವಾದ ದಿನದಿಂದ ಖಾರ್ಕೀವ್ ಬಂಕರ್‌ನಲ್ಲಿದ್ದ ಬ್ಯಾಡಗಿಯ ವೈದ್ಯ ಕೀಯ ವಿದ್ಯಾರ್ಥಿ ಕುಶಾಲ್ ಸಂಕಣ್ಣನವರೊಂದಿಗೆ ನಿರಂತರ ಸಂಪರ್ಕದೊಂದಿಗೆ ಇದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಧೈರ್ಯ ತುಂಬಿ ಎಚ್ಚರದಿಂದಿರುವಂತೆ ತಿಳಿಸುತ್ತಿದ್ದೆವು. ಆದರೆ ಬೇರೆ ಬಂಕರ್‌ನಲ್ಲಿದ್ದ ನವೀನ್ ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ಶ್ರೀಗಳು ನುಡಿದರು.

ಚಳಗೇರಿಯ ಇನ್ನಿಬ್ಬರು ವಿದ್ಯಾರ್ಥಿಗಳಾದ ಸುಮನ್ ಮತ್ತು ಅಮಿತ್ ಅವರೊಡನೆ ಸಂಪರ್ಕಿಸಿ, ಸುರಕ್ಷಿತವಾಗಿ ಬನ್ನಿರಿ ಎಂದು ಹೇಳಿದ ಶ್ರೀಗಳು, ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ಕರೆತರಲು ರಾಯಭಾರಿ ಅಧಿಕಾರಿಗಳು ಗಣನೀಯ ಪ್ರಮಾಣದಲ್ಲಿ ಪ್ರಯತ್ನ ನಡೆಸಿರುವುದು ಹಾಗೂ ಅವರ ಪ್ರಯಾಣಕ್ಕೆ ಸರ್ಕಾರ ನೂರಾರು ಬಸ್‌ಗಳನ್ನು ಒದಗಿಸಿರುವುದು ಪ್ರಶಂಸನೀಯ ಎಂದರು.

error: Content is protected !!