ಮಹಿಳೆಗೆ ಸಮಾನತೆ ಕಲ್ಪಿಸಿದರೆ ಮಹಿಳಾ ದಿನಾಚರಣೆ ಸಾರ್ಥಕತೆ

ಜಗಳೂರಿನ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಅಭಿಮತ

ಜಗಳೂರು, ಮಾ.8- ಮಹಿಳೆಗೆ ಸಮಾನತೆ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಮಹಿಳೆಯನ್ನು ದೌರ್ಜನ್ಯಗಳಿಂದ ಮುಕ್ತರನ್ನಾಗಿಸಿದರೆ ಮಾತ್ರ ಮಹಿಳಾ ದಿನಾಚರಣೆ ಸಾರ್ಥಕತೆ ಬರುತ್ತದೆ ಎಂದು ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಹೇಳಿದರು.

ಪಟ್ಟಣದ ಉಜ್ಜಿನಿ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯವಿವಾಹ ಹೆಣ್ಣು ಭ್ರೂಣ ಹತ್ಯೆ ಮುಕ್ತ ಸಮಾಜ ನಿರ್ಮಾಣಕ್ಕೆ  ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆ ಯನ್ನು ದೇವತೆಗಳಿಗೆ  ಹೋಲಿಕೆ ಮಾಡಿದರೆ ಸಾಲದು ಗೌರವಿಸಿ ಕೃತಿಗೊಳಿಸಬೇಕು ಎಂದು ಸಲಹೆ‌ ನೀಡಿದರು.

ಜಗಳೂರಿನಲ್ಲಿ  ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿ  ಜೀವಂತವಾಗಿದೆ.ಪ್ರತಿಯೊಬ್ಬರೂ ವಿರೋಧಿಸಬೇಕು. ಹೆಣ್ಣುಮಕ್ಕಳು ಜಾಗೃತರಾಗಬೇಕು. ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ಸ್ವಯಂ ರಕ್ಷಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಾದ ತುಂಟಾಟ, ತಮಾಷೆ, ಪೋಷಕರ ಬಡತನದ ಅನುಭವಗಳೇ ಸಾಧನೆಗೆ ಅಡಿಗಲ್ಲುಗಳು, ಸಾಧನೆ ಯಾರೊಬ್ಬರ ಸ್ವತ್ತಲ್ಲ ಯಾವುದೂ ಅಡ್ಡಿಯಲ್ಲ. ಉತ್ತಮ ಚಾರಿತ್ರ್ಯ, ಶ್ರದ್ಧೆ ಅಗತ್ಯ.

ವಿಶ್ವಮಟ್ಟದ ಓಲಂಪಿಕ್ ಕ್ರೀಡೆಗಳಲ್ಲಿ ಸಾಧನೆಗೈದ ವರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬದವರೇ ಹೆಚ್ಚಾಗಿ ದ್ದಾರೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ‌ ಪ್ರಥಮ ಸ್ಥಾನ ಪಡೆದವರಲ್ಲಿ ಬಡ ಕುಟುಂಬದ ಮಕ್ಕಳೇ ಅಧಿಕ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಉತ್ತಮ ಸಾಧನೆಗೆ ಪೋಷಕರೇ ಸ್ಫೂರ್ತಿ ಎಂದು ಅಭಿಮತ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ವಕೀಲ ಸಣ್ಣ ಓಬಯ್ಯ ಮಾತನಾಡಿ, ಅಭಿವೃದ್ಧಿ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಆದರೆ ಭಾರತದಲ್ಲಿ ಮಹಿಳಾಪರ ಸಾಕಷ್ಟು ಕಾನೂನುಗಳು ಜಾರಿಯಲ್ಲಿದ್ದರೂ ಮಹಿಳೆ ಶೋಷಣೆಗೊಳಗಾಗಿದ್ದು. ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ ಎಂದರು.

ಹಿರಿಯ ವೈ.ಹನುಮಂತಪ್ಪ ಮಾತನಾಡಿ, ಮಹಿಳೆಯರ ಅವಿರತ ಸೇವೆಯಿಂದ ಕುಟುಂಬದ ನೆಮ್ಮದಿಯ ಜೀವನ ಸಾಧ್ಯ. ಆದರೆ ಮಾತೃ ದೇವೋಭವ ಎನ್ನುವವರಿಂದ ದೌರ್ಜನ್ಯ ಸಲ್ಲದು, ಪ್ರತಿಯೊಬ್ಬರೂ ಕಾನೂನಿನ ಪ್ರಜ್ಞೆ ಅರಿಯಬೇಕು ಎಂದು‌ ಹೇಳಿದರು.

ವಕೀಲರಾದ ಜ್ಯೋತಿ ಮಾತನಾಡಿ, ಶತಮಾನಗಳಿಂದ ವಿಶ್ವಮಟ್ಟದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇ ಛಾಪು ಮೂಡಿಸಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸಿದ್ದಾಳೆ ಎಂದರು.

ಈ ಸಂದರ್ಭದಲ್ಲಿ  ವಕೀಲರ ಸಂಘದ ಅಧ್ಯಕ್ಷ ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ ರುದ್ರೇಶ್, ವಕೀಲರಾದ  ಟಿ.ಬಸವರಾಜ್, ನಾಗರತ್ನಮ್ಮ, ನಾಗೇಶ್‌, ತಿಪ್ಪೇಸ್ವಾಮಿ, ಭೂಪತಿ, ಜಯ್ಯಣ್ಣ, ಮುಖ್ಯಶಿಕ್ಷಕ ಶರಣಪ್ಪ, ಶಿಕ್ಷಕರಾದ ಸಾವಿತ್ರಮ್ಮ, ಪ್ರಕಾಶ್, ಶ್ರೀಧರ್, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!