26ಕ್ಕೆ ಎಲೆಬೇತೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

26ಕ್ಕೆ ಎಲೆಬೇತೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ - Janathavaniಸರ್ವಾಧ್ಯಕ್ಷರಾದ ಸುಶೀಲಾದೇವಿ ಆರ್.ರಾವ್ ಅವರಿಗೆ  ಅಧಿಕೃತ ಆಮಂತ್ರಣ

ದಾವಣಗೆರೆ,ಮಾ.7- ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ದಿನಾಂಕ 26 ಮತ್ತು 27 ರಂದು ದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮದಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರ ನೇತೃತ್ವದ ನಿಯೋಗವು ಸುಶೀಲಾದೇವಿ ಅವರ ನಿವಾಸಕ್ಕೆ ಇಂದು ಸಂಜೆ ಭೇಟಿ ನೀಡಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅಲಂಕರಿಸಿ, ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿಕೊಡುವಂತೆ ಅಧಿಕೃತವಾಗಿ ಆಮಂತ್ರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನದ ಹಿನ್ನೆಲೆಯಲ್ಲಿ ಮೊನ್ನೆ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಶೀಲಾದೇವಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರಲ್ಲದೇ, ನಾಡು – ನುಡಿಗೆ ಸುಶೀಲಾದೇವಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಸುಶೀಲಾದೇವಿ ಅವರು ದಾವಣಗೆರೆ ತಾಲ್ಲೂಕಿಗೆ ಹೆಮ್ಮೆ ತರುವಂತಹ ಸೊಸೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಅವರು ಸುಮಾರು 10 ಕಾದಂಬರಿಗಳು, 50 ಬಿಡಿ ಲೇಖನಗಳು, ಕಥೆಗಳು, ನಾಟಕಗಳನ್ನು ರಚಿಸಿರುವುದು  ಅವರ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿಗಳಾಗಿವೆ. ಅವರ ನಾಟಕಗಳು ಬಾನುಲಿಯಲ್ಲಿ ಬಿತ್ತರಗೊಂಡಿವೆ. ಅವರ ಆಯ್ಕೆ ಅತ್ಯಂತ ಸಮರ್ಥನೀಯ ಹಾಗೂ ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಲೋಕಕ್ಕೊಂದು ಗೌರವದ ಸಂಕೇತವಾಗಿದೆ ಎಂದು ವಾಮದೇವಪ್ಪ ಅವರು ಸಂತಸ ವ್ಯಕ್ತಪಡಿಸಿದರು.

ಎಲೆಬೇತೂರು ಗ್ರಾಮದ ಮುಖಂಡರೊಂದಿಗೆ ತಾವು ಸಿರಿಗೆರೆಗೆ ತೆರಳಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವಂತೆ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಕೇಳಿಕೊಂಡಿದ್ದು, ಜಗದ್ಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ, ಸಮ್ಮೇಳನದ ಅಧ್ಯಕ್ಷತೆಗೆ ಸುಶೀಲಾದೇವಿ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಎ.ಜಿ.ಸುಮತಿ ಜಯಪ್ಪ, ಜಿಲ್ಲಾ ಪದಾಧಿಕಾರಿಗಳಾದ ಬಿ.ಎಂ.ಭೈರೇಶ್ವರ, ಶ್ರೀಮತಿ ಸತ್ಯಭಾಮ ಮಂಜುನಾಥ, ಶ್ರೀಮತಿ ರುದ್ರಾಕ್ಷಿ ಬಾಯಿ, ಶ್ರೀಮತಿ ಎಸ್.ಎಂ.ಮಲ್ಲಮ್ಮ ತಾಲ್ಲೂಕು ಪದಾಧಿಕಾರಿಗಳಾದ ಪರಮೇಶ್ವರಪ್ಪ ದಾಗಿನಕಟ್ಟೆ, ಆರ್. ಶಿವಕುಮಾರ್ ಮತ್ತು ಇತರರು ನಿಯೋಗದಲ್ಲಿದ್ದರು.

ಎಲೇಬೇತೂರು ಗ್ರಾಮದ ಹೆಚ್.ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ. ಸುಮಾ ಬಿ.ವಿರುಪಾಕ್ಷಪ್ಪ, ಮಂಗಳಾ ಷಡಾಕ್ಷರಪ್ಪ, ಹಂಚಿನಮನೆ ಗಂಗಪ್ಪ, ಎಂ. ಷಡಾಕ್ಷರಪ್ಪ ಬೇತೂರು ಇನ್ನಿತರರು ಉಪಸ್ಥಿತರಿದ್ದರು.

ಅಧ್ಯಾಪಕ ಸಿ.ಜಿ.ಜಗದೀಶ್ ಕೂಲಂಬಿ, ಡಾ. ಆನಂದ ಋಗ್ವೇದಿ, ಶ್ರೀಮತಿ ಎಚ್.ಆರ್.ವಿನುತಾ, ಚಿರಂಜೀವಿ, ಅನಿಕೇತ್, ಅಶುತೋಷ್ ಅವರುಗಳು ಹಾಜರಿದ್ದರು.

error: Content is protected !!