ಹೋರಾಟದ ವಿಡಿಯೋ ಕೇಳಿದ ಸರ್ಕಾರ : ನಂದಿಗಾವಿ ಶ್ರೀನಿವಾಸ್
ಹರಿಹರ, ಮಾ. 7- ಹರಿಹರ ತಾಲ್ಲೂಕಿ ನಲ್ಲಿ ಮೆಡಿಕಲ್ ಕಾಲೇಜು ಹೋರಾಟಕ್ಕೆ ನಗರದ ಎಲ್ಲಾ ಸಂಘಟನೆಯವರು ಬೆಂಬಲ ನೀಡಿದ್ದಾರೆ. ಈಗ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಯ ವತಿಯಿಂದ ನಮಗೆ ಇಲ್ಲಿನ ಹೋರಾಟದ ವಿಡಿಯೋ ಕಳಿಸಿ ಎಂದು ದೂರವಾಣಿ ಕರೆ ಬಂದಿದೆ. ಇದು ನಮ್ಮ ಮೆಡಿಕಲ್ ಕಾಲೇಜು ಹೋರಾಟಕ್ಕೆ ಮೊದಲ ಸ್ಪಂದನೆ ಸಿಕ್ಕಂತಾಗಿದೆ ಎಂದು ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಂದಿಗಾವಿ ಶ್ರೀನಿವಾಸ್ ಹೇಳಿದ್ದಾರೆ.
ನಗರದ ಗಾಂಧಿ ವೃತ್ತದಲ್ಲಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವತಿಯಿಂದ, ಮೆಡಿಕಲ್ ಕಾಲೇಜು ಆರಂಭಿಸುವಂತೆ ಇಂದು ನಡೆಸಿದ ಧರಣಿ ಸಂದರ್ಭದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರಕ್ಕೆ ಹಿಂದೆ ಸಹಿ ಸಂಗ್ರಹ ಮಾಡಲಾಗಿತ್ತು. ನಂತರದಲ್ಲಿ ಇತ್ತೀಚೆಗೆ ಬೆಂಗಳೂರಿಗೆ ನಿಯೋಗ ಹೋಗಿ, ಮುಖ್ಯಮಂತ್ರಿಗಳನ್ನು ಕಂಡು ಮೆಡಿಕಲ್ ಕಾಲೇಜ್ ಸ್ಥಾಪನೆ, ಅಗಸನಕಟ್ಟೆ ಕೆರೆ ಅಭಿವೃದ್ಧಿ, ಬೈರನಪಾದ ಯೋಜನೆ, ಹರಿಹರೇಶ್ವರ ದೇವಾಲಯ ಅಭಿವೃದ್ಧಿ ಸೇರಿದಂತೆ, ಅನೇಕ ವಿಚಾರಗಳಿಗೆ ಮನವಿಯನ್ನು ನೀಡಲಾಯಿತು. ಆದರೆ, ಆ ಸಮಯದಲ್ಲಿ ನಮ್ಮ ತಂಡಕ್ಕೆ ಮುಖ್ಯಮಂತ್ರಿ ಸರಿಯಾದ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಹೇಳಿದರು.
ಹೋರಾಟದ ವಿಡಿಯೋ ಕಳಿಸಿ ಎಂದು ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರ ಕೇಳಿಕೊಂಡಿದ್ದರಿಂದಾಗಿ ಇಂದು ನಡೆದ ಹೋರಾಟದ ಎಲ್ಲಾ ಪೋಟೋ ಮತ್ತು ಮನವಿ ಪತ್ರದ ಜೊತೆಗೆ ವಿಡಿಯೋ ಕಳಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಫಲವಾಗಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಹೆಚ್. ನಿಜಗುಣ, ಗೌರವ ಅಧ್ಯಕ್ಷ ಹೆಚ್. ಕೆ. ಕೊಟ್ರಪ್ಪ, ಜಿ.ಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಬಿ.ಮುಗ್ದುಂ, ಪತ್ರಕರ್ತ ಟಿ. ಇನಾಯತ್ ಉಲ್ಲಾ ಮಾತನಾಡಿದರು.
ಎಕ್ಕೆಗೊಂದಿ ರುದ್ರೇಗೌಡ ಮಾತನಾಡಿ, ಜಿಲ್ಲೆಯ ಸಂಸದರು ಹರಿಹರ ತಾಲ್ಲೂಕಿನ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದರ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವತಿಯಿಂದ ಬೆಳಗ್ಗೆ ನಗರದ ಫಕ್ಕೀರಸ್ವಾಮಿ ಮಠದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಚರಿಸಿ, ಗಾಂಧಿ ವೃತ್ತದಲ್ಲಿ ಸಾಂಕೇತಿಕ ಧರಣಿ ಆರಂಭಿಸಿ, ಸಂಜೆ ಗ್ರೇಡ್ 2 ತಹಶೀಲ್ದಾರ್ ಶಶಿಧರ್ ರವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ನಗರಸಭೆ ಮಾಜಿ ಸದಸ್ಯರಾದ ನಾಗರಾಜ್ ಮೆಹರ್ವಾಡೆ, ಬಿ.ಕೆ. ಸೈಯದ್ ರೆಹಮಾನ್, ಹರಿಹರೇಶ್ವರ ಬ್ಯಾಂಕ್ ನಿರ್ದೇಶಕ ಮಂಡಳಿಯ ಜಿ.ಕೆ. ಮಲ್ಲಿಕಾರ್ಜುನ, ಅನ್ವರ್ ಪಾಷಾ, ಕೆ.ಜಿ. ರವೀಂದ್ರ, ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ. ಜಿ.ವಿ. ಪ್ರವೀಣ್, ಈಶಪ್ಪ ಬೂದಿಹಾಳ, ರಮೇಶ್ ಮಾನೆ, ಗೋವಿಂದ, ಇಲಿಯಾಸ್ ಆಹ್ಮದ್, ಕೆಂಚಪ್ಪ, ಡಾ ಖಮಿತ್ಕರ್, ವೆಂಕಟೇಶ, ಸಂತೋಷ, ಶಿವಕುಮಾರ, ಆಸೀಫ್ ಆಲಿ ಖಾನ್, ಶೇಖರಪ್ಪ, ಸುಚೇತ್ ಪೂಜಾರ್, ಅಭಿದಾಲಿ, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.