ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ, ಬಹುಭಾಷಾ ಕವಿಗೋಷ್ಠಿಯಲ್ಲಿ ಜಸ್ಟಿನ್ ಡಿಸೌಜಾ
ದಾವಣಗೆರೆ, ಮಾ. 6 – ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೊಂಕಣಿ ಭಾಷೆ, ರಾಷ್ಟ್ರಭಾಷೆಯಾಗಿ ಮಾನ್ಯತೆ ಪಡೆದಿದ್ದರೂ ಸಹ ಸ್ವತಂತ್ರ ಲಿಪಿ ಇಲ್ಲ ಎಂಬ ಕೊರತೆ ಎದುರಿಸುತ್ತಿದೆ. ಈ ಬಗ್ಗೆ ಗೋವಾ, ಕರ್ನಾಟಕ ಸರ್ಕಾರಗಳು ಮತ್ತು ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೌಜಾ ಒತ್ತಾಯಿಸಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ಮಂಗಳೂರು), ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ (ಸಾಲಿಗ್ರಾಮ) ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಮತ್ತು ಬಹುಭಾಷಾ ಕವಿಗೋಷ್ಠಿಯಲ್ಲಿ ಅವರು §ಕೊಂಕಣಿ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ¬ ಕುರಿತು ಅವರು ಉಪನ್ಯಾಸ ನೀಡಿದರು.
ಕೊಂಕಣಿ ಭಾಷೆ 50 ಸಾವಿರ ವರ್ಷ ಗಳ ಇತಿಹಾಸ ಹೊಂದಿದೆ. ಬುಡಕಟ್ಟು ಜನರು ಈ ಭಾಷೆ ಮಾತನಾಡುತ್ತಿದ್ದರು. ಮಧ್ಯ ಏಷಿಯಾ – ಪೂರ್ವ ಯುರೋಪ್ ನಿಂದ ಈ ಭಾಷೆ ಬಂದಿದೆ. ಕೊಂಕಣಿ ಮೇಲೆ ಕನ್ನಡ, ತುಳು, ಮರಾಠಿ ಸೇರಿದಂತೆ ಹಲವು ಭಾಷೆಗಳ ಪ್ರಭಾವ ಇದೆ. ಕೊಂಕ ಣಿಯಲ್ಲಿ ವಿವಿಧ ಉಪ ಭಾಷೆಗಳಿವೆ ಎಂದರು.
ಕೊಂಕಣಿ ರಾಷ್ಟ್ರೀಯ ಭಾಷೆಯಾಗಿದ್ದರೂ ಅಳಿವಿನ ಅಂಚಿನಲ್ಲಿದೆ. ಮುಂದಿನ ಪೀಳಿಗೆಗೆ ಕೊಂಕಣಿ ಭಾಷೆ ಕಲಿಸಬೇಕಿದೆ ಎಂದ ಅವರು, ಸ್ವತಂತ್ರ ಲಿಪಿ ಹೊಂದಿದರೆ ಮಕ್ಕಳು ಶಾಲೆಗಳಲ್ಲಿ ಕೊಂಕಣಿ ಕಲಿಯಲು ಇನ್ನಷ್ಟು ಅನುಕೂಲವಾಗುತ್ತದೆ ಎಂದರು.
ಕೊಂಕಣಿಗರು ಕಷ್ಟ ಜೀವಿಗಳು ಹಾಗೂ ಬುದ್ಧಿವಂತರು. ವಿಶ್ವದಾದ್ಯಂತ ಹರಡಿ ಎಲ್ಲರ ಜೊತೆ ಬೆರೆತು ಬದುಕುತ್ತಿದ್ದಾರೆ. ಮೃದು ಮಾತು, ಶಾಂತಿಪ್ರಿಯ ಹಾಗೂ ಸಹಬಾಳ್ವೆಗೆ ಹೆಸರಾಗಿದ್ದಾರೆ ಎಂದರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಾಶಿವ ಗಡದ ಕೊಂಕಣಿ ಕಲಾವಿದ ಡಾ. ವಸಂತ ಬಾಂದೇಕರ್, ಕೊಂಕಣಿ ಭಾಷಿಗರಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರ ಪಟ್ಟಿಯೇ ಇದೆ. ಕರ್ನಾಟಕದ ಹಲವಾರು ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಕೊಂಕಣಿ ಭಾಷೆಯ ಶಾಸನಗಳು ಕಂಡು ಬಂದಿವೆ ಎಂದವರು ಹೇಳಿದರು.
ದೇವನಾಗರಿ, ಕನ್ನಡ, ಮಲೆಯಾಳಂ, ರೋಮನ್ ಹಾಗೂ ಅರೇಬಿಯನ್ ಲಿಪಿಗಳನ್ನು ಕೊಂಕಣಿಗರು ಪ್ರಮುಖವಾಗಿ ಬಳಸುತ್ತಿದ್ದಾರೆ. ದೇವನಗರಿಯಲ್ಲಿ ಬರೆಯುವ ಕೊಂಕಣಿಗೆ ರಾಷ್ಟ್ರೀಯ ಮಾನ್ಯತೆ ಇದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರೂ, ಬೆಳ್ಳಿ – ಬಂಗಾರದ ವರ್ತಕರೂ ಆದ ನಲ್ಲೂರು ಲಕ್ಷ್ಮಣರಾವ್ ರೇವಣಕರ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಕೆ.ಎನ್. ಸ್ವಾಮಿ, ಹುಬ್ಬಳ್ಳಿಯ ಸುರೇಂದ್ರ ವಿ. ಪಾಲನಕರ್, ಆರ್.ಬಿ. ಶೆಣೈ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ನೀಲಾವರ ಭಾಸ್ಕರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.