ದಾವಣಗೆರೆ, ಮಾ.3- ವಿಜ್ಞಾನ ಮನುಕುಲದ ಬದುಕು ಹಸನು ಮಾಡಲು ಸದ್ಬಳಕೆಯಾಗಬೇಕೇ ಹೊರತು ಜನರ ಸಾವು, ಬದುಕು ನಾಶಪಡಿಸಲು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ವಿಷಾದಿಸಿದರು.
ನಗರದ ಧ.ರ.ಮ ವಿಜ್ಞಾನ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಜ್ಞಾನ ಜನರ ಬದುಕು ಹಸನು ಮಾಡಲು ಹುಟ್ಟಿಕೊಂಡಿದೆ. ಆದರೆ ದುರಂತವೆಂದರೆ ಯುದ್ಧ ಎದುರಿಸುವ ಸಂಕಷ್ಟ ಸ್ಥಿತಿ ಪ್ರಪಂಚದ ಅನೇಕ ದೇಶಗಳಲ್ಲಿ ನಿರ್ಮಾಣವಾಗಿ ತತ್ತರಿಸಿ ಹೋಗಿವೆ. ನೂರಾರು ವಿದ್ಯಾರ್ಥಿಗಳ ಜೀವನ ಬೀದಿ ಪಾಲಾಗಿದೆ. ಸಾಕಷ್ಟು ಜನರು ಮರಣವನ್ನಪ್ಪಿದ್ದಾರೆ. ಇದು ವಿಜ್ಞಾನದ ಕೊಡುಗೆ ಎಂಬುದಾಗಿ ಟೀಕಾಕಾರರು ಟೀಕಿಸುತ್ತಿದ್ದಾರೆ. ವಿಜ್ಞಾನ ಯಾವತ್ತೂ ಧ್ವಂಸ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದರು.
ಧರ್ಮ ಹೇಗೆ ಸತ್ಯವನ್ನೇಳುವುದೋ ಹಾಗೆಯೇ ವಿಜ್ಞಾನವೂ ಸತ್ಯದ ಹಾದಿಯಲ್ಲಿ ನಡೆಯಬೇಕೆನ್ನುತ್ತದೆ. ಧರ್ಮ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಮುಖಗಳಂತೆ. ಮನುಕುಲದ ನಾಶ, ಜನರ ಬದುಕು ಎರಡು ತತ್ತರಿಸಿ ಹೋಗುವಂತಹ ಅಣ್ವಸ್ತ್ರಗಳು ಬೇಕೇ ಎಂದು ಪ್ರಶ್ನಿಸಿಕೊಂಡು ಅದರ ತಯಾರಿಕೆ ಬಗ್ಗೆ ಚಿಂತಿಸುವಂತೆ ವಿಜ್ಞಾನಿಗಳಿಗೆ ಕರೆಕೊಟ್ಟರು.
ಬಹಳಷ್ಟು ದೇಶಗಳು ತಮ್ಮಲ್ಲಿರುವ ಮದ್ದು, ಗುಂಡುಗಳ ವ್ಯಾಪಾರ, ಮಾರಾಟವಾಗಲೆಂದು ಯುದ್ಧಕ್ಕೆ ತಯಾರಾಗಿ ನಿಲ್ಲುತ್ತವೆ. ಇಡೀ ಪ್ರಪಂಚದಲ್ಲಿ ಮದ್ದು ಗುಂಡು ತಯಾರಿಕೆಯಲ್ಲಿ ಶೇ. 60ರಷ್ಟು ಕಾರ್ಖಾನೆಗಳು ಅಮೇರಿಕಾದಲ್ಲಿವೆ. ಒಂದು ಕಡೆ ಶಾಂತಿಯನ್ನು ಬಯಸಿ, ಇತ್ತ ತಮ್ಮಲ್ಲಿರುವ ಮದ್ದು-ಗುಂಡಗಳ ಮಾರಾಟಕ್ಕಾಗಿ ಯುದ್ಧಗಳನ್ನು ಬಯಸುತ್ತಿವೆ ಎಂದು ಹೇಳಿದರು.
ರಾಮನ್ ಅವರ ಸಂಶೋಧನೆಯನ್ನು ಪ್ರಪಂಚಕ್ಕೆ ಗೊತ್ತು ಮಾಡಿದ ದಿನವೇ ವಿಜ್ಞಾನ ದಿನ. ಅಂದು ರಾಮನ್ ಅವರು ಪ್ರಪಂಚಕ್ಕೆ ಕೊಟ್ಟ ವಿಜ್ಞಾನದ ಕೊಡುಗೆ ಬಹಳ ಕಡಿಮೆ ಎಂದು ಪಾಶ್ಚಾತ್ಯರು ತಿಳಿಸಿದ್ದರು. ಒಟ್ಟು 250 ರೂ. ಮೌಲ್ಯದ ಉಪಕರಣದಲ್ಲೇ ನೊಬೆಲ್ ಪ್ರಶಸ್ತಿ ಪಡೆದ ಪ್ರಪಂಚದ ಭೌತ ವಿಜ್ಞಾನಿ ಇದ್ದರೆ ಅದು ರಾಮನ್. 21ನೇ ಶತಮಾನದಲ್ಲಿ ರಾಮನ್ ಅವರ ಸಂಶೋಧನೆಯ ಫಲ ಅತ್ಯಂತ ಉಪಯುಕ್ತ ಪಡೆಯಲಾಗುತ್ತಿದೆ. ರಾಮನ್ ಅವರ ಸಂಶೋಧನೆಯ ಪರಿಣಾಮ ಇತ್ತೀಚೆಗೆ ಬೆಳಕಿಗೆ ಬಂದಿರುವುದಕ್ಕೆ ವಿಜ್ಞಾನ ದಿನಾಚರಣೆಯೇ ಸಾಕ್ಷಿಯಾಗಿದೆ ಎಂದರು.
ಧ.ರ.ಮ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ವನಜಾ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ಕಮಲಾ ಸೊಪ್ಪಿನ್ ಸೇರಿದಂತೆ ಇತರರು ಇದ್ದರು. ಗಣಿತ ವಿಭಾಗದ ಮುಖ್ಯಸ್ಥರಾದ ಮಂಗಳ ಗೌರಿ ಪ್ರಾರ್ಥಿಸಿದರು. ವಿಜ್ಞಾನ ವೇದಿಕೆಯ ಸಂಚಾಲಕರಾದ ಡಾ. ಬಿ.ಸಿ. ಚೇತನಾ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಸಿ. ಹರೀಶ್ ಕುಮಾರ್ ನಿರೂಪಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹೆಚ್.ಬಿ.ವಿ. ಸೌಮ್ಯ ವಂದಿಸಿದರು.