24ನೇ ವಾರ್ಡ್ ಕಾಮಗಾರಿಗಳ ಬಗ್ಗೆ ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ತಿರುಗೇಟು
ದಾವಣಗೆರೆ, ಮಾ. 6 – ತಾವೇ ಗುತ್ತಿಗೆದಾರರಾಗಿರುವುದರಿಂದ ಕಾಮಗಾರಿ ವಿಳಂಬವಾಗುವ ಜೊತೆಗೆ ಗುಣಮಟ್ಟದಲ್ಲಿ ಲೋಪವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪ ತಳ್ಳಿ ಹಾಕಿರುವ 24ನೇ ವಾರ್ಡ್ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರು ಹತಾಶೆಯಿಂದ ತೇಜೋವಧೆ ಉದ್ದೇಶದಿಂದ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
24ನೇ ವಾರ್ಡ್ನ ಮೋತಿ ವೀರಪ್ಪ ಶಾಲೆ ಹಿಂಭಾಗದಲ್ಲಿ ಜಲಸಿರಿ ಮತ್ತಿತರೆ ಕಾಮಗಾರಿಗಳು 3-4 ತಿಂಗಳಿನಿಂದ ಆರಂಭವಾಗಿದ್ದರೂ ಶೇ.25ರಷ್ಟು ಪೂರ್ಣಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.
ಗುಂಡಿ ಸರ್ಕಲ್ನಿಂದ ಲೂರ್ಡ್ಸ್ ಬಾಯ್ಸ್ ಶಾಲೆಯ ರಸ್ತೆಯವರೆಗಿನ (ಡಾ. ಎಂ.ಸಿ. ಮೋದಿ ರಸ್ತೆ) ಮತ್ತು ಮೋತಿ ವೀರಪ್ಪ ಕಾಲೇಜಿನಿಂದ ಎ.ವಿ.ಕೆ. ಕಾಲೇಜು ರಸ್ತೆಯವರೆಗಿನ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರಾದ ಉದಯ ಶಿವಕುಮಾರ್ ಅವರಿಗೆ ಜನವರಿ 21, 2022ರಂದು ಪಾಲಿಕೆ ಆಯುಕ್ತರು ನೀಡಿದ್ದಾರೆ. ಈ ಕಾಮಗಾರಿಯೂ ಪ್ಯಾಕೇಜ್ ಟೆಂಡರ್ ಆಗಿದ್ದು, ವಾರ್ಡ್ ಸಂಖ್ಯೆ 17, 24, 23 ಮತ್ತು 22ರ ಕಾಮಗಾರಿಗಳು ಸೇರಿವೆ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.
ನಂತರದ 40 ದಿನಗಳಲ್ಲಿ ಗುತ್ತಿಗೆದಾರರು ಡಾ. ಎಂ.ಸಿ. ಮೋದಿ ರಸ್ತೆಯ 400 ಮೀಟರ್ಗೂ ಹೆಚ್ಚು ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ರಾತ್ರಿ ವೇಳೆಯೂ ಕಾರ್ಯ ನಿರ್ವಹಿಸಿ ತ್ವರಿತವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಮೋತಿ ವೀರಪ್ಪ ಕಾಲೇಜು ಪಕ್ಕದಲ್ಲಿ ಉಳಿದ 200 ಮೀಟರ್ ರಸ್ತೆಯನ್ನೂ ಸಹ ಜಲಸಿರಿಯ ಮನೆ ನಲ್ಲಿಗಳ ಸಂಪರ್ಕ ಎರಡು ದಿನಗಳಲ್ಲಿ ಮುಕ್ತಾಯಗೊಂಡ ನಂತರ ಕಾಮಗಾರಿಯನ್ನು 8-10 ದಿನಗಳಲ್ಲಿ ಪೂರ್ಣಗೊಳಿಸುವ ಸಿದ್ಧತೆ ಈಗಾಗಲೇ ಮಾಡಿಕೊಂಡಿದ್ದಾರೆ. ಇದು ಕಾಂಕ್ರೀಟ್ ಕಾಮಗಾರಿಯಾದ ಕಾರಣ ಎಲ್ಲ ಯುಟಿಲಿಟಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದವರು ಹೇಳಿದ್ದಾರೆ.
ತಮ್ಮ ತೇಜೋವಧೆ ಮಾಡಲು ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಆಲೋಚನೆ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.