ಸರ್ಕಾರಕ್ಕೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ವೀಣಾ ಮಹಾಂತೇಶ್ ಒತ್ತಾಯ
ಹರಪನಹಳ್ಳಿ, ಮಾ.6- ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದ ಹುದ್ದೆಗಳನ್ನು ಉಳಿಕೆ ವೃಂದಕ್ಕೆ ಪರಿವರ್ತನೆ ಮಾಡುವುದರಿಂದ ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಅನ್ಯಾಯವಾಗುತ್ತಿದ್ದು, 371ಜೆ ಗೆ ದಕ್ಕೆಯಾಗುವ ಕೆಲಸವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ.ವೀಣಾ ಮಹಾಂತೇಶ್ ಆರೋಪಿಸಿದರು.
ಪಟ್ಟಣದ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಕಚೇರಿಯಲ್ಲಿ ಇಂದು ಜರುಗಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಭಾರತ ಸಂವಿಧಾನಕ್ಕೆ ಕಲಂ 371 ಜೆ ಸೇರ್ಪಡೆಗೊಳಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಅದರಂತೆ ರಾಜ್ಯಪಾಲರು ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013 ರಚಿಸುವ ಮೂಲಕ ರಾಜ್ಯದ ಸಿವಿಲ್ ಸೇವೆಗಳಲ್ಲಿ 7 ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರಾದೇಶಿಕ ಸ್ಥಳೀಯ ವೃಂದದಲ್ಲಿ ಗ್ರೂಪ್-ಎ.ಬಿ.ಸಿ ಮತ್ತು ಡಿ ಕ್ರಮವಾಗಿ ಶೇ 75, 80, 85 ರಷ್ಟು ಹಾಗೂ ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಶೇ. 8ರಷ್ಟು ಹುದ್ದೆಗಳನ್ನು ನೇರ ಮತ್ತು ಮುಂಬಡ್ತಿ ನೇಮಕಾತಿಗೆ ಮೀಸಲಾತಿ ನೀಡಲಾಗಿದೆ. ಅದರಂತೆ ಕರ್ನಾಟಕ ಸರ್ಕಾರದ ಸಚಿವಾಲಯ ರಾಜ್ಯ ಮಟ್ಟದ ಸಂಸ್ಥೆಯಾಗಿರುವುದರಿಂದ ಶೇ. 8ರಷ್ಟು ಹುದ್ದೆಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಈ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಮುಂಬಡ್ತಿಗೆ ಮೀಸಲಿರಿಸಿದ ಖಾಲಿ ಇರುವ ಸಹಾಯಕ ವೃಂದದ ಹುದ್ದೆಗಳನ್ನು ಕಲ್ಯಾಣ ಕರ್ನಾಟಕೇತರ, ಸ್ಥಳಿಯೇತರ ವೃಂದದ ಕಿರಿಯ ಸಹಾಯಕ ಅಭ್ಯರ್ಥಿಗಳಿಗೆ ಮುಂಬಡ್ತಿ ನೀಡಿದರೆ, ಈ ಭಾಗದ ಅಭ್ಯರ್ಥಿಗಳಿಗೆ ಘೋರ ಅನ್ಯಾಯವಾಗುತ್ತಿದ್ದು, ಸರ್ಕಾರ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಮುಂಬಡ್ತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಸಿಸಿ ಕಾನೂನು ಮತ್ತು ಮೂಲಭೂತ ಹಕ್ಕುಗಳ ಮಾಹಿತಿ ವಿಭಾಗದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಸಿದ್ದಲಿಂಗನಗೌಡ ಮಾತನಾಡಿ, ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013 ರಚಿಸುವ ಮೂಲಕ ರಾಜ್ಯದ ಸಿವಿಲ್ ಸೇವೆಗಳಲ್ಲಿ 7 ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರಾದೇಶಿಕ ಸ್ಥಳೀಯ ವೃಂದದಲ್ಲಿ ಗ್ರೂಪ್- ಎ.ಬಿ.ಸಿ ಮತ್ತು ಡಿ ಕ್ರಮವಾಗಿ ಶೇ. 75, 80, 85 ರಷ್ಟು ಹಾಗೂ ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಶೇ. 8ರಷ್ಟು ಹುದ್ದೆಗಳನ್ನು ನೇರ ಮತ್ತು ಮುಂಬಡ್ತಿ ನೇಮಕಾತಿಗೆ ಮೀಸಲಾತಿ ನೀಡಲಾಗಿದ್ದರೂ ಕೂಡ ಕಲ್ಯಾಣ ಕರ್ನಾಟ ಕೇತರ ಸ್ಥಳಿಯೇತರ ವೃಂದದ ಕಿರಿಯ ಸಹಾಯಕ ಅಭ್ಯರ್ಥಿಗಳಿಗೆ ಮುಂಬಡ್ತಿ ನೀಡಿದರೆ ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಹಾಗೂ ಹುದ್ದೆಗಳನ್ನು ನಿಯಮಬಾಹಿರವಾಗಿ ಕಸಿದು ಕೊಂಡಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್, ರಾಜಾನಾಯ್ಕ, ಪುರಸಭೆ ಮಾಜಿ ಅಧ್ಯಕ್ಷರಾದ ಕವಿತಾ ವಾಗೀಶ್, ಗಾಯತ್ರಮ್ಮ ಸೇರಿದಂತೆ ಇತರರು ಇದ್ದರು.