ದಾವಣಗೆರೆ, ಮಾ.6- ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಎರಡು ವರ್ಷಗಳ ಕಾಲ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ತಮಗಿದೆ ಎಂದು ಎ.ನಾಗರಾಜ್ ತಿಳಿಸಿದ್ದಾರೆ.
ಹಿಂದುಳಿದ ಜಾತಿಯಲ್ಲೊಂದಾದ ಈಡಿಗ ಸಮಾಜಕ್ಕೆ ಸೇರಿದ ತನಗೆ ಜವಾಬ್ದಾರಿಯುತ ಸ್ಥಾನವನ್ನು 2 ವರ್ಷಗಳ ಅವಧಿಗೆ ನೀಡಿ, ಜನಸೇವೆ ಮಾಡಲು ಅನುವು ಮಾಡಿಕೊಟ್ಟ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ವಿಶ್ವಾಸಕ್ಕೆ ನಾವು ಯಾವಾಗಲೂ ಚಿರಋಣಿ ಎಂದು ಅವರು ಕೃತಜ್ಞತೆ ಹೇಳಿದ್ದಾರೆ.
ತಮ್ಮ ಅವಧಿಯಲ್ಲಿ ಕೊರೊನಾದಂತಹ ಮಹಾಮಾರಿ ಬಂದಾಗ ಶಾಸಕರು ಮತ್ತು ಮಾಜಿ ಸಚಿವರ ಸಹಕಾರದಿಂದ ಎಲ್ಲಾ ವಾರ್ಡ್‍ಗಳಲ್ಲಿ ಉಚಿತವಾಗಿ ಲಸಿಕೆ ನೀಡಿರುವುದು ಸೇರಿದಂತೆ, ಅನೇಕ ಕೆಲಸಗಳಲ್ಲಿ ಸಹಕಾರ ಕೊಟ್ಟಿರುವುದನ್ನು ಅವರು ಸ್ಮರಿಸಿದ್ದಾರೆ.