ಆಚಾರ್ಯರ ಸಂಸ್ಕಾರದಿಂದ ಶಿಲೆಗೂ ದೈವತ್ವ

ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 14ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಡಾ. ಶಂಭು ಬಳಿಗಾರ್

ದಾವಣಗೆರೆ,  ಫೆ. 4- ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯವರು ನೀಡಿದ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕಲಿಸುವ ಅಗತ್ಯವಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಶಂಭು ಬಳಿಗಾರ ಹೇಳಿದರು.

ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಡಾ.ಸದ್ಯೋಜಾತ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯವರ 14ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜಾನಪದ ನೆಲೆ-ಸಂಸ್ಕೃತಿ ಸೆಲೆ ಕುರಿತು ಅವರು ಉಪನ್ಯಾಸ ನೀಡಿದರು.

ಸಂಸ್ಕಾರ ನಮ್ಮನ್ನು ಬಹು ಎತ್ತರಕ್ಕೆ ಕೊಂಡೊ ಯ್ಯುತ್ತದೆ. ಆಚಾರ್ಯರ ಸಂಸ್ಕಾರದಿಂದ ಶಿಲೆಗೂ ದೈವತ್ವ ಲಭಿಸುತ್ತದೆ. ಸಂಸ್ಕಾರ ವಿಕಾರಗೊಂಡಾಗ ಮನುಷ್ಯನಲ್ಲಿ ಮೋಹ ಹೆಚ್ಚಾಗುತ್ತದೆ. ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಿದರು.

ಕಬ್ಬು ಪ್ರಕೃತಿಯಾದರೆ, ಕಬ್ಬನ್ನು ಹಿಂಡಿ ಹಾಲು ಮಾಡುವುದು ಸಂಸ್ಕೃತಿ. ಆದರೆ ಅದೇ ಕಬ್ಬನ್ನು ಕೊಳೆ ಹಾಕಿ ಹೆಂಡ ಮಾಡಿಕೊಂಡು ಕುಡಿಯುವುದು ವಿಕೃತಿಯಾಗುತ್ತದೆ ಎಂದರು.

ಶಿವಶರಣ ಕಾಯಕ, ದಾಸೋಹ ಪರಿಕಲ್ಪನೆ ಮರೆಯಾಗಿದೆ. ಪ್ರಾಮಾಣಿಕವಾಗಿ ಮಾಡಿದ ಕಾಯಕದಿಂದ ಬಂದ ಹಣದಲ್ಲಿ ಒಂದಿಷ್ಟು ಹಣವನ್ನು ದಾಸೋಹಕ್ಕೆ ಮೀಸಲಿಡಬೇಕು. ಹಸಿದವರಿಗೆ ಅನ್ನ ನೀಡಬೇಕು. ನಡೆ-ನುಡಿ ಒಂದಾಗಿರಬೇಕು ಎಂದು ಶಿವಶರಣರು ಸಾರಿದ್ದರು. ಆದರೆ ಇಂದು ಅದೆಲ್ಲಾ ಮರೆಯಾಗಿ ಸಂಸ್ಕೃತಿ, ಸಂಸ್ಕಾರ ಇಲ್ಲವಾಗಿದೆ.  ಕೊರೊನಾದಿಂದಾಗಿ ಕಷ್ಟದ ದಿನಗಳನ್ನು ಕಳೆದಿದ್ದೇವೆ. ಆದದ್ದೆಲ್ಲಾ ಒಳಿತಿಗೆ ಎಂಬ ಭಾವನೆಯಿಂದ, ಒಳ್ಳೆಯದರ ಬಗ್ಗೆಯೇ ಆಲೋಚಿಸಬೇಕು ಎಂದು ಹೇಳಿದರು.

ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯ ವರೊಟ್ಟಿಗಿನ ಒಡನಾಟವನ್ನು ಸ್ಮರಿಸಿದರು. ನಾವು ಮಾಡುವ ಯಾವುದೇ ಕೆಲಸ, ಕಾರ್ಯಗಳಿಗೆ ಅವರ ಸಲಹೆ ಪಡೆಯುತ್ತಿದ್ದೆವು ಎಂದು ಸ್ಮರಿಸಿದರು.

ವರ್ತಕ ಬಿ.ಸಿ. ಉಮಾಪತಿ ಮಾತನಾಡುತ್ತಾ, ಸದ್ಯೋಜಾತ ಶ್ರೀಗಳಂತವರು ನಮಗೆ ಹಿಂದೆ ಸಿಕ್ಕಿರಲಿಲ್ಲ. ಮುಂದೆಯೂ ಸಿಗುವುದಿಲ್ಲ. ಅವರು ಒಂದು ಸಮಾಜಕ್ಕೆ ಮಾತ್ರ ಸೀಮಿತರಾಗದೇ, ಸರ್ವ ಧರ್ಮದವರಿಗೂ ಸ್ವಾಮೀಜಿಗಳಾಗಿದ್ದರು ಎಂದು ಬಣ್ಣಿಸಿದರು.

ಕಾಯಕ ಜೀವಿಗಳಾಗಿದ್ದ ಅವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ನಮಗೆಲ್ಲಾ ಅವರೇ ಮಾರ್ಗದರ್ಶಕರಾಗಿದ್ದರು. ಅವರೇ ತಯಾರಿಸಿದ ಊಟವನ್ನು ನಮಗೆ ಬಡಿಸುತ್ತಿದ್ದರು. ಕಾರು ಕೊಳ್ಳುವ ಸಲಹೆಯನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದರು. ಅಂತಹ ಸರಳತೆ ಬೇರಾವ ಸ್ವಾಮೀಜಿಗಳಲ್ಲೂ ಇಲ್ಲ ಎಂದು ಹೇಳಿದರು.

ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರೀಗಳೊಂ ದಿಗಿನ ಒಡನಾಟ ನೆನಪಿಸಿಕೊಳ್ಳುತ್ತಾ, ವಿದ್ಯಾರ್ಥಿ ಸಂಘಟನೆಗಳಲ್ಲಿ ತಪ್ಪುಗಳು ನಡೆದರೆ ಖಂಡಿಸು ತ್ತಿದ್ದರು. ಅವರ ನುಡಿ ಅಷ್ಟೇ ಅಲ್ಲದೆ, ನಡೆಯೂ ಅನುಕರಣೀಯವಾಗಿತ್ತು ಎಂದು ಹೇಳಿದರು.

ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ದ್ದರು. ಡಾ. ಸ್ವಾಮಿ ತ್ರಿಭುವಾನಂದ ಹಿರೇಮಠ ಸ್ವಾಗತಿಸಿದರು. ಶ್ರೀಮತಿ ವಿಜಯ ಹಿರೇಮಠ ಹಾಗೂ ಶ್ರೀ ಗುರು ಪಂಚಾಕ್ಷರ ಸಂಗೀತ ವಿದ್ಯಾಲ ಯದ ವಿದ್ಯಾರ್ಥಿ ವೃಂದದವರು ಪ್ರಾರ್ಥಿಸಿದರು.

error: Content is protected !!