ದಾವಣಗೆರೆ, ಮಾ.3- ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜ್ಯಾತ್ಯತೀತ ಜನತಾದಳವು ಸರ್ಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಲಕ್ಷಣಗಳು ಇವೆ. ಮತದಾರರ ಒಲವು ಜೆಡಿಎಸ್ ನತ್ತ ವಾಲುತ್ತಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತಿಳಿಸಿದರು.
ಇಂದು ಸಂಜೆ ನಗರದ ರೋಟರಿ ಬಾಲಭವನದಲ್ಲಿ ಜ್ಯಾತ್ಯತೀತ ಜನತಾದಳದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇದೀಗ ಜನರ ಮನಸ್ಸು, ಭಾವನೆ ಬದಲಾಗಿದ್ದು, ಜ್ಯಾತ್ಯತೀತ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನತ್ತ ಜನರ ಮನಸ್ಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವೇ ಸರ್ಕಾರದ ಆಡಳಿತ ನಡೆಸಲಿದ್ದು, ನಮ್ಮ ನಾಯಕ ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನವಿಲ್ಲ.
ಇದಕ್ಕೆ ನನ್ನ ಕ್ಷೇತ್ರದ 6 ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಕ್ಷಕ್ಕೆ ಜನ ಬೆಂಬಲಿಸುತ್ತಿರುವುದೇ ಸಾಕ್ಷಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರಾದೇಶಿಕ ಪಕ್ಷವೇ ಪ್ರಬಲ
ರಾಜ್ಯದಲ್ಲಿ ಜೆಡಿಎಸ್ ಅನಿವಾರ್ಯ ಎಂಬುದು ಜನರ ಮಾತಾಗಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷವೇ ಪ್ರಬಲ. ರಾಷ್ಟ್ರೀಯ ಪಕ್ಷಗಳು ಪ್ರಬಲವಾಗಿಲ್ಲ. ಆದರೆ ಪ್ರಚಾರದಲ್ಲಿ ಪ್ರಬಲವಾಗಿವೆ. ಬೇರು ಮಟ್ಟದಲ್ಲಿ ಜನರ ಮನಸ್ಸಿನಲ್ಲಿ ಪ್ರಾದೇಶಿಕ ಪಕ್ಷಗಳೇ ಗಟ್ಟಿಯಾಗಿ ಉಳಿದಿವೆ, ಕಾಂಗ್ರೆಸ್ ತಣ್ಣಗಾಗಿದೆ. ಆ ಪಕ್ಷದಲ್ಲೇ ಅಧಿಕಾರಕ್ಕಾಗಿ ಕಿತ್ತಾಟ, ಪೈಪೋಟಿ. ಮುಂದಿನ ನಾಯಕತ್ವದ ಬಗ್ಗೆಯೇ ಗೊಂದಲವಿದೆ. ಗೆಲುವು ಸಾಧಿಸಲು ಆಗದಿದ್ದರೂ ಗೆಲ್ಲಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ಹಾಗಾಗಿ ಪಕ್ಷದ ಬಗ್ಗೆ ಹಗುರ ಬೇಡ. ನಮ್ಮ ಪಕ್ಷ ಜ್ಯಾತ್ಯತೀತ ಪಕ್ಷವಾಗಿದ್ದು, ಎಲ್ಲಾ ವರ್ಗದ ಜನ ನಮ್ಮೊಂದಿಗಿದ್ದಾರೆ. ಅವರ ವಿಶ್ವಾಸ ಗಳಿಸುವ ಬುದ್ಧಿವಂತಿಕೆ ಬೇಕು. ಕೂತಲ್ಲೇ ಪಕ್ಷ ಕಟ್ಟಲಾಗಲ್ಲ.
– ಹೆಚ್.ಎಸ್. ಶಿವಶಂಕರ್.
ನಮ್ಮ ಪಕ್ಷದ ನಾಯಕರ ಸಂಖ್ಯಾ ಬಲವಾಗಿರುವ ವಿಷನ್ 2023 ಮತ್ತು ವಿಷನ್ 123 ಅಂದರೆ 2023ರಲ್ಲಿ 123 ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕೆಂಬ ನಿಶ್ಚಿತ ಗುರಿಯಾಗಿದೆ. ನಮ್ಮ ನಾಯಕರು ಕೊಟ್ಟ ವಸತಿ, ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗದ ಈ ಪಂಚ ಯೋಜನೆಗಳೇ ಎಂತಹವರ ಮನಸ್ಸು ಬದಲಿಸಿ ಜೆಡಿಎಸ್ ಪಕ್ಷಕ್ಕೇ ಮತ ಚಲಾಯಿಸಬೇಕೆಂದು ನಿರ್ಧರಿಸುವ ಕಾಲ ಬರಲಿದೆ ಎಂದರು.
ಪಕ್ಷದ ಪ್ರಭಾವ ಕುಸಿದ ಕಾರಣ ಧರ್ಮದ ರಾಜಕಾರಣ ಮಾಡುತ್ತಿದ್ದು, ಇದರಲ್ಲಿ ಯಶಸ್ಸು ಕಾಣುವುದಿಲ್ಲ. ಮನೆಗೆ ಹೋಗುವುದು ಗ್ಯಾರಂಟಿ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಅಮಾನುಲ್ಲಾ ಖಾನ್, ದಕ್ಷಿಣ ಕ್ಷೇತ್ರದ ಅಧ್ಯಕ್ಷ ಯು.ಎಂ. ಮನ್ಸೂರ್ ಅಲಿ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್, ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಉತ್ತರ ಅಧ್ಯಕ್ಷ ಬಾತಿ ಶಂಕರ್, ಮುಖಂಡರಾದ ಕಡತಿ ಅಂಜಿನಪ್ಪ, ರೇಖಾ ಸಿಂಗ್, ಯೋಗೇಶ್, ಕುಕ್ಕವಾಡ ಜಗದೀಶ್, ಜಮೀರ್ ಅಹಮ್ಮದ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.