ಡಾ|| ಎಸ್.ಶಿಶುಪಾಲ
ದಾವಣಗೆರೆ, ಮಾ. 3- ಯಾವುದೇ ವೈಜ್ಞಾನಿಕ ಸಂಶೋಧನೆಗಳು ಮನುಕುಲಕ್ಕೆ ಒಳಿತು ಮಾಡಬೇಕು. ಪ್ರಶಸ್ತಿ, ಪುರಸ್ಕಾರ, ಇಲ್ಲಿ ಮುಖ್ಯವಲ್ಲ ಎಂದು ದಾವಣಗೆರೆ ವಿವಿಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ|| ಎಸ್.ಶಿಶುಪಾಲ ಅಭಿಪ್ರಾಯಪಟ್ಟರು.
ನಗರದ ಶಾಮನೂರು – ಬನಶಂಕರಿ ಬಡಾವಣೆಯಲ್ಲಿರುವ ಮಯೂರ ಗ್ಲೋಬಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಉದ್ಘಾಟಿಸಿ ಮಾತನಾಡಿದ ಅವರು, ಲೂಯಿ ಪಾಶ್ಚರ್, ಗ್ರೆಗೋರ್ ಮೆಂಡಲ್ ಮುಂತಾದವರು ವಿಶ್ವಕ್ಕೆ ನೆರವಾಗುವಂತಹ ಸಂಶೋಧನೆ ಗಳನ್ನು ಮಾಡಿದರು. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ಅಂಥದೇ ಸಂಶೋಧನೆ ಮಾಡಿದವರು. ಅವರ ನೆನಪಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದರು.
ದಾವಣಗೆರೆಯಲ್ಲಿ 248 ರೀತಿಯ ಪಕ್ಷಿಗಳನ್ನು ಗುರುತಿಸಿ ದ್ದೇನೆ ಎಂದ ಶಿಶುಪಾಲ, ಕೆಲ ಬಾತು ಕೋಳಿಗಳು ಮಂಗೋಲಿ ಯಾದಿಂದ ಹಿಮಾಲಯ ಪರ್ವತ ದಾಟಿ ದಾವಣಗೆರೆಗೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಅವುಗಳ ರಕ್ಷಣೆ ನಮ್ಮ ಹೊಣೆ ಎಂದರು.
‘ನನ್ನ ಗಿಡ ನನ್ನ ಸ್ನೇಹಿತ’ ಎಂಬ ಘೋಷಣೆ ಅಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡನೆಟ್ಟು ಬೆಳೆಸಬೇಕು. ಪ್ರಕೃತಿ-ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾ ರ್ಥಿಗಳಿಂದ ವಿಜ್ಞಾನಕ್ಕೆ ಸಂಬಂಧಪಟ್ಟ ಹಾಡು, ಆಟ ಗಳು ಪ್ರದರ್ಶನಗೊಂಡವು. ಶಿಕ್ಷಕರಾದ ದೇವಿಕಾರಾಣಿ, ರೋಸಾ, ಕು.ಕಾವ್ಯ, ರೋಹಿಣಿ, ರಶ್ಮಿ ಉಪಸ್ಥಿತರಿದ್ದರು.