ಉಕ್ರೇನ್‌ನಿಂದ ಸುರಕ್ಷಿತವಾಗಿ ವಾಪಸ್ಸಾಗುತ್ತಿರುವ ವಿದ್ಯಾರ್ಥಿಗಳು

ಉಕ್ರೇನ್‌ನಿಂದ ಸುರಕ್ಷಿತವಾಗಿ ವಾಪಸ್ಸಾಗುತ್ತಿರುವ ವಿದ್ಯಾರ್ಥಿಗಳು - Janathavaniದಾವಣಗೆರೆ, ಫೆ. 3 – ದೂರದ ಉಕ್ರೇ‌ನ್‌ನ ಓದಿಗೆಂದು ತೆರಳಿ, ವಾರದ ಭೀಕರ ಯುದ್ಧ ಕಂಡು ಜೀವ ಕೈಯ್ಯಲ್ಲಿ ಹಿಡಿದಿದ್ದ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳು, ಕೊನೆಗೂ ನರಕ ದರ್ಶನದಿಂದ ಮುಕ್ತಿ ಪಡೆದು ಸುರಕ್ಷಿತವಾಗಿ ತವರಿಗೆ ತಂಡ ತಂಡವಾಗಿ ವಾಪಸ್ಸಾಗುತ್ತಿದ್ದಾರೆ.

ನಗರದ ವಿನಯ್ ಆರ್. ಕಲ್ಲಿಹಾಳ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ಪೋಲ್ಯಾಂಡ್ ತಲುಪಿ ಅಲ್ಲಿ ಕೇಂದ್ರ ಸಚಿವ ವಿ.ಕೆ. ಸಿಂಗ್ ನೇತೃತ್ವದ ಅಧಿಕಾರಿಗಳ ನೆರವಿನಿಂದ ದೆಹಲಿ ಮೂಲಕ ಬೆಂಗಳೂರಿಗೆ ಗುರುವಾರ ತಡರಾತ್ರಿ ಬಂದಿಳಿದಿದ್ದಾರೆ.

ನಗರದ ಡಿ.ಆರ್.ಆರ್. ಪಾಲಿಟೆಕ್ನಿಕ್ ಉಪನ್ಯಾಸಕರಾದ ಕೆ.ಬಿ. ರುದ್ರೇಶ್ ಹಾಗೂ ಕೆ.ಪಿ.ಸುಮ ಕಲ್ಲಿಹಾಳ್ ದಂಪತಿಯ ಪುತ್ರ ವಿನಯ್, 4  ವರ್ಷಗಳ ಹಿಂದೆ ಉಕ್ರೇನ್‌ನ ಖಾರ್ಕೀವ್‌ ಇಂಟರ್‌ನ್ಯಾಷನಲ್ ಮೆಡಿಕಲ್ ಕಾಲೇಜ್‌ಗೆ ದಾಖಲಾಗಿದ್ದರು. ಫೆಬ್ರವರಿಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವೆ ಸಮಸ್ಯೆ ಭುಗಿಲೆದ್ದಿತ್ತು. ಉಕ್ರೇನ್ ತೊರೆಯುವಂತೆ ವಿದ್ಯಾರ್ಥಿಗಳಿಗೆ ಭಾರತದ ರಾಯಭಾರಿ ಕಚೇರಿಯ ಸೂಚನೆಯೂ ದೊರೆತಿತ್ತು. ಆದರೆ, ಉಕ್ರೇನ್‌ ಅಧಿಕಾರಿಗಳು ಹಾಗೂ ಉಪನ್ಯಾ ಸಕರು ವಾಪಸ್ ಹೋಗದಂತೆ  ಸಲಹೆ ನೀಡಿದ್ದರು. ಆನ್‌ಲೈನ್ ಕಲಿಕೆಗೆ ಅವಕಾಶ ಇರಲಿಲ್ಲ, ಜೊತೆಗೆ ಪರೀಕ್ಷೆ ಬರೆಯಲು ಹಾಜರಾತಿಯೂ ಕಡ್ಡಾಯವಾಗಿತ್ತು. ಹೀಗಾಗಿ ವಾಪಸ್ ಬರುವ ಬಗ್ಗೆ ಹೆಚ್ಚು ಯೋಚಿಸಲಿಲ್ಲ ಎಂದು ವಿನಯ್ ಹೇಳಿದ್ದಾರೆ.

ಆದರೆ, ಪರಿಸ್ಥಿತಿ ಗಂಭೀರವಾಗಿದ್ದನ್ನು ನೋಡಿ ಫೆಬ್ರವರಿ 20ರಂದು  ವಾಪಸ್ ಬರಲು ವಿಮಾನದ ಟಿಕೆಟ್ ಸಹ ಬುಕ್ ಮಾಡುವ ಪ್ರಯತ್ನ ನಡೆಸಿದೆ. ಆದರೆ, ಆ ವೇಳೆಗೆ ಟಿಕೆಟ್ ಸಿಗುವುದೇ ಕಷ್ಟವಾಗಿತ್ತು.

ಫೆಬ್ರವರಿ 24ರಂದು ರಷ್ಯಾ ದಾಳಿ ಆರಂಭಿಸಿ  ವಿಮಾನಗಳೆಲ್ಲ ರದ್ದಾದವು. ನಾನು ಹಾಗೂ ಕರ್ನಾಟಕದ ಸ್ನೇಹಿತರು ಬಾಂಬ್ ಶೆಲ್ಟರ್ ನಲ್ಲಿ ಆಶ್ರಯ ಪಡೆದೆವು. ಮೂರ್ನಾಲ್ಕು ದಿನಗಳ ನಂತರ ಇರುವ ಊಟವೂ ಖಾಲಿ ಆಗಿ, ಚಾಕೊಲೇಟ್ ಒಂದೇ ಉಳಿದಿತ್ತು. ಕುಡಿಯುವ ನೀರಿಗೂ ಸರದಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು ಎಂದವರು ಹೇಳಿದ್ದಾರೆ.

ಈ ವೇಳೆಯೇ ಕೆಲವರು ಧೈರ್ಯ ಮಾಡಿ ಉಕ್ರೇನ್ ಗಡಿಗೆ ತೆರಳಿ ಅಲ್ಲಿಂದ ಭಾರತಕ್ಕೆ ಹೋಗುವುದಾಗಿ ಹೇಳಿದರು. ಹಾಗೆ ಹೋದ ಕೆಲವರು ಪೋಲ್ಯಾಂಡ್ ಗಡಿಯಲ್ಲಿ ಸಿಲುಕಿ ಅತಂತ್ರರಾದರು. ಇದನ್ನು ಕೇಳಿದ ನಾವು, ಇರುವಲ್ಲಿಯೇ ಉಳಿಯುವುದು ವಾಸಿ ಎಂಬ ತೀರ್ಮಾನಕ್ಕೆ ಬಂದವು.

ಮಾರ್ಚ್ 1ರಂದು ರಾಯಭಾರಿ ಕಚೇರಿಯಿಂದ ಬಂದ ಸೂಚನೆಯಂತೆ ನಾನು ಹಾಗೂ ಕೆಲ ಸ್ನೇಹಿತರು ರೈಲು ಮೂಲಕ ಲೆವಿವ್‌ಗೆ ತೆರಳಲು ನಿರ್ಧರಿಸಿದೆವು. ನಾವಿದ್ದ ಕಟ್ಟಡದಲ್ಲೇ ಇದ್ದ ರಾಣೇಬೆನ್ನೂರಿನ ಚಳಗೇರಿಯ ನವೀನ್ ಶೇಖರಗೌಡಗೆ ಹೊರಡುವ ಬಗ್ಗೆ ತಿಳಿಸಿದೆವು. ನೀವು ಹೊರಡಿ, ನಾವು ನಂತರದಲ್ಲಿ ಬರುತ್ತೇವೆ ಎಂದು ನವೀನ್ ನಮ್ಮನ್ನು ಬೀಳ್ಕೊಟ್ಟಿದ್ದ. ನಾವು ಇನ್ನೇನು ಲೆವಿವ್‌ ರೈಲು ಹತ್ತಬೇಕು ಎನ್ನುವಷ್ಟರಲ್ಲೇ, ನಾವಿದ್ದ ಕಟ್ಟಡದ ಪಕ್ಕ ಶೆಲ್ ದಾಳಿ ನಡೆದು ನವೀನ್ ಬಾರದ ಲೋಕಕ್ಕೆ ತೆರಳಿದ ಸುದ್ದಿ ಅಪ್ಪಳಿಸಿತ್ತು.

ಲೆವಿವ್‌ಗೆ ಬಂದ ಮೇಲೆ ಬೇರೊಂದು ಲೋಕಕ್ಕೆ ಬಂದ ಭಾಸವಾಯಿತು. ಖಾರ್ಕೀವ್‌ ಬಂಕರ್‌ನಲ್ಲಿ ಹಿಡಿ ಅನ್ನಕ್ಕೂ ಪರದಾಡಿ, ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ನಮಗೆ, ಕಾಳಜಿ ತೋರುವವರು ಸಿಕ್ಕಿದರು. ಲೆವಿವ್‌ನಿಂದ ನಮ್ಮನ್ನು ಪೋಲ್ಯಾಂಡ್‌ ಗಡಿಯೊಳಗೆ ಕರೆದೊಯ್ಯಲಾಯಿತು.

ಅಲ್ಲಿನ ಭಾರತೀಯ ಅಧಿಕಾರಿಗಳು ತವರಿಗೆ ಕಳಿಸುವವರೆಗೂ ಜವಾಬ್ದಾರಿ ನಮ್ಮದು ಎಂಬ ಭರವಸೆ ನೀಡಿದರು. ಭಾರತ ಸರ್ಕಾರ ನಮ್ಮನ್ನು ಕರೆ ತರಲು ಕೇಂದ್ರ ಸಚಿವ ಹಾಗೂ ಸೈನ್ಯದ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರನ್ನು ಕಳಿಸಿತ್ತು. ಸಿಂಗ್ ನಮ್ಮನ್ನೆಲ್ಲ ಆತ್ಮೀಯವಾಗಿ ಮಾತನಾಡಿಸಿದರು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರು ಎಂದು ವಿನಯ್ ತಿಳಿಸಿದ್ದಾರೆ.

error: Content is protected !!