ವಿಜೃಂಭಣೆಯ ಉಕ್ಕಡಗಾತ್ರಿ ಅಜ್ಜಯ್ಯನ ತೇರು

ಮಲೇಬೆನ್ನೂರು, ಮಾ.3- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾರಥೋತ್ಸವ ಗುರುವಾರ ಬೆಳಿಗ್ಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ, ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವಕ್ಕಾಗಿ ಕಾದು ನಿಂತಿದ್ದ ಸಾವಿರಾರು ಜನ ಅಜ್ಜಯ್ಯನಿಗೆ ಜೈಕಾರ ಹಾಕಿ ರಥ ಎಳೆದು ಸಂಭ್ರಮಿಸಿದರು.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದಲೂ ಬಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಡೊಳ್ಳು, ಭಜನೆ, ಕೀಲು ಕುಣಿತ, ಜಾಂಜ್ ಮೇಳ, ಗೊಂಬೆ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.

ಭಕ್ತರು ರಥದ ಮೇಲೆ ಬಾಳೆಹಣ್ಣು, ಮಂಡಕ್ಕಿ ಮೆಣಸಿನಕಾಳು ಎಸೆದು ಭಕ್ತಿ ಸಮರ್ಪಿಸಿದರು.ತೇರು ಹರಿಯುವ ಜಾಗ ಬಹಳ ಚಿಕ್ಕದಾಗಿರುವು ದರಿಂದ ಜನರು ಕಟ್ಟಡ, ಮರಗಳ ಮೇಲೆ ಕುಳಿತು ರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವ ಸಂದರ್ಭದಲ್ಲಿ ಜನರ ನೂಕಾಟ-ತಳ್ಳಾಟ ಹೆಚ್ಚಾಗಿದ್ದರಿಂದ ವಯಸ್ಕರಿಗೆ, ಮಕ್ಕಳಿಗೆ ಬಹಳ ತೊಂದರೆ ಉಂಟಾಯಿತು.

ಗದ್ದುಗೆ ಟ್ರಸ್ಟ್ ಕಮಿಟಿಯವರು ಜಿಲ್ಲಾಡಳಿ ತದ ನಿರ್ದೇಶನದಂತೆ ಮುಂಚೆಯೇ 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳನ್ನು ಜಾತ್ರೆಗೆ ಕರೆತರದಂತೆ ಹೇಳಿದ್ದರೂ ಜಾತ್ರೆಯಲ್ಲಿ ಅಂತಹವರ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ಜನರನ್ನು ನಿಯಂತ್ರಿಸಲು ಪೊಲೀಸರು, ಟ್ರಸ್ಟ್ ಕಮಿಟಿಯವರು ಹಾಗೂ ದೇವಸ್ಥಾನ ಸಿಬ್ಬಂದಿಯವರು ಹರಸಾಹಸ ಪಟ್ಟರು.

ಪಿಕ್ ಪಾಕೆಟ್ ತಡೆಯಲು ವಿಶೇಷ ಪೊಲೀಸ್ ಸಿಬ್ಬಂದಿ ನೇಮಿಸಿದ್ದರೂ ಮತ್ತು ದೇವಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಪಿಕ್ ಪಾಕೆಟ್ ನಡೆದವು. ರಥೋತ್ಸವದ ವೇಳೆ ಮಕ್ಕಳನ್ನು ಕಳೆದುಕೊಂಡವರು ಅವರ ಹುಡುಕಾಟಕ್ಕಾಗಿ ಪೊಲೀಸರ ನೆರವು ಪಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.

ಎಲ್ಲೆಂದರಲ್ಲಿ ಉಗುಳದಂತೆ, ಬಟ್ಟೆ-ದೇವರ ಫೋಟೋಗಳನ್ನು ಹಾಕದಂತೆ ಬೈಕ್ ಮೂಲಕ ಪ್ರಚಾರ ಮಾಡುತ್ತಿದ್ದರೂ ಜನರು ಮಾತ್ರ ಆ ಎಲ್ಲಾ ಕೆಲಸಗಳನ್ನು ಎಗ್ಗಿಲ್ಲದಂತೆ ಮಾಡುತ್ತಿದ್ದರು.

ದರ್ಶನಕ್ಕೆ ಸಾಲು : ದೇವಸ್ಥಾನ ಸಮಿತಿಯವರು ಮಾಡಿದ್ದ ವ್ಯವಸ್ಥೆಯಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಸಮಾಧಾನವಾಗಿ ಅಜ್ಜಯ್ಯನ ಗದ್ದುಗೆ ದರ್ಶನ ಮಾಡುತ್ತಿದ್ದದು ವಿಶೇಷವಾಗಿತ್ತು.

ಪುಣ್ಯಸ್ನಾನ : ಜಾತ್ರೆಗೆ ಬಂದಿದ್ದ ಜನರ ಪೈಕಿ ಬಹುತೇಕ ಜನರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನದಿ ದಡದಲ್ಲಿಯೇ ಅಡುಗೆ ಮಾಡಿ ಗಂಗೆ ಪೂಜೆ ಹಾಗೂ ನೈವೇದ್ಯ ಮಾಡಿದರು.

ಉಳಿದುಕೊಳ್ಳಲು ಜಾಗ ಸಿಗದವರು ನದಿಯ ನಡುಗಡ್ಡೆಯಲ್ಲಿ ಬಿಡಾರ ಹಾಕಿದ್ದು ಗಮನ ಸೆಳೆಯಿತು. ಕೆಲವರು ಮೈಮೇಲೆ ಅಜ್ಜಯ್ಯ ಬಂದಿದ್ದಾನೆಯಂತೆ ಬಿಡು ಅಜ್ಜಯ್ಯ ಎಂದು ಚೀರಾಡುವ ದೃಶ್ಯ ಸಾಮಾನ್ಯವಾಗಿತ್ತು.

ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಗದ್ದುಗೆ ಟ್ರಸ್ಟ್‌ ಕಮಿಟಿ ಕಾರ್ಯದರ್ಶಿ ಸುರೇಶ್‌ ಸೇರಿದಂತೆ, ಎಲ್ಲಾ ಸದಸ್ಯರು ಹಾಜರಿದ್ದು, ರಥೋತ್ಸವದ ಯಶಸ್ಸಿಗೆ ಶ್ರಮಿಸಿದರು.

ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರು ಗುರುವಾರ ಸಂಜೆ ಉಕ್ಕಡಗಾತ್ರಿಗೆ ಆಗಮಿಸಿ, ಭದ್ರತೆ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಗ್ರಾಮಾಂತರ ಡಿವೈಎಸ್ಪಿ ಬಸವರಾಜ್‌, ಸಿಪಿಐ ಸತೀಶ್‌, ಮಲೇಬೆನ್ನೂರು ಪಿಎಸ್‌ಐ ರವಿಕುಮಾರ್‌ ನೇತೃತ್ವದಲ್ಲಿ ಭಾರೀ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ಬೃಹತ್ ಹೂವಿನ ಮಾಲೆಯನ್ನು ರಥಕ್ಕೆ ಸಮರ್ಪಿಸಿದರು.

error: Content is protected !!