ದನವಿನ ಓಣಿಯಲ್ಲಿನ ಅನಧಿಕೃತ ಗುಡಿಸಲುಗಳ ತೆರವು

ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದಡಿ ಒಂಭತ್ತು ಮಂದಿ ಪೊಲೀಸ್‌ ವಶಕ್ಕೆ

ದಾವಣಗೆರೆ, ಮಾ.4- ಇಲ್ಲಿಗೆ ಸಮೀಪದ ಆವರಗೆರೆ ಬಳಿಯ ದನವಿನ ಓಣಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಗುಡಿಸಲು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಗುಡಿಸಲುಗಳನ್ನು ಜಿಲ್ಲಾಡಳಿತ ಗುರುವಾರ ರಾತ್ರಿ ತೆರವುಗೊಳಿಸಿತು.

 ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಹಾಗೂ ನಗರ ಪಾಲಿಕೆ ಆಯುಕ್ತ  ವಿಶ್ವನಾಥ ಮುದಜ್ಜಿ ಹಾಗೂ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಹತ್ತಾರು ಜೆಸಿಬಿ ಯಂತ್ರಗಳೊಂದಿಗೆ ಹಾಗೂ ಇನ್ನೂರಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ರಾತ್ರಿ ವೇಳೆ ತೆರವು ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ಅಲ್ಲಿನ ಗುಡಿಸಲು ವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸಿದ್ದಾರೆ. ಆದರೂ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ತೆರವು ವೇಳೆ ಅಡ್ಡಿಪಡಿಸಿದ ಒಂಭತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೆಸಿಬಿ ವಾಹನ ಚಾಲಕನ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆನ್ನಲಾಗಿದೆ.

ಮತ್ತೆ ಗುಡಿಸಲು ಹಾಕುವ ಪಟ್ಟು: ಮತ್ತೆ  ಅಲ್ಲಿ ಗುಡಿಸಲು ಹಾಕುತ್ತೇವೆ. ನಮಗೆ ಮನೆಗಳಿಲ್ಲ. ಬಾಡಿಗೆ ಕಟ್ಟಿ ಬದುಕುವಷ್ಟು ಶಕ್ತಿ ಇಲ್ಲ. ಮತ್ತೆ ಅಲ್ಲಿ ಗುಡಿಸಲು ಹಾಕುತ್ತೇವೆ ಎಂದು ಸ್ಥಳೀಯರು ನಗರ ಪಾಲಿಕೆ ಕಚೇರಿಗೆ ಆಗಮಿಸಿ ಪ್ರತಿಭಟನಾ ಧರಣಿ ಮುಖೇನ ಬಿಗಿ ಪಟ್ಟು ಹಿಡಿದಿದ್ದರು.

ಮಧ್ಯರಾತ್ರಿ ಸಮಯದಲ್ಲಿ ನಗರ ಪಾಲಿಕೆ ಅಧಿಕಾರಿಗಳು ದನವಿನ ಓಣಿಗೆ ಜೆಸಿಬಿ ಯಂತ್ರಗಳ ಸಮೇತ ಬಂದು ತೆರವುಗೊಳಿಸಿದರು. ಪಾಲಿಕೆಯ ಈ ಕಾರ್ಯದಿಂದಾಗಿ ಜನರ ಬದುಕು ಅತಂತ್ರವಾಗಿದೆ. ಅವರಿಗೆ ಇರಲು ಮನೆ ಇಲ್ಲ, ಬಾಡಿಗೆ ಕಟ್ಟಿ ಬದುಕುವಷ್ಟು ಶಕ್ತಿ ಇಲ್ಲ. ಪಾಲಿಕೆ ಅಧಿಕಾರಿಗಳು ಒಂಭತ್ತು ಜನರ ಮೇಲೆ ದೂರು ಕೊಟ್ಟಿದ್ದಾರೆ. ಈ ದೂರನ್ನು ವಾಪಸ್ ಪಡೆಯಬೇಕು ಎಂದು ಮುಖಂಡ ಹೆಚ್. ಮಲ್ಲೇಶ್ ಆಗ್ರಹಿಸಿದರು.

ಎರಡು ಬಾರಿ ಎಚ್ಚರಿಕೆ : ದನವಿನ ಓಣಿಯಲ್ಲಿನ ಅನಧಿಕೃತ ಗುಡಿಸಲುಗಳ ತೆರವಿಗೆ ಮೌಖಿಕವಾಗಿ ಸೂಚನೆ ಸೇರಿದಂತೆ ಎರಡು ಬಾರಿ ಎಚ್ಚರಿಕೆ ನೀಡಿದ್ದರೂ ಗುಡಿಸಲುಗಳನ್ನು ತೆರವುಗೊಳಿಸಿರಲಿಲ್ಲ. ಕಾರಣ ಅನಧಿಕೃತ ಗುಡಿಸಲು ತೆರವು ಮಾಡಲಾಯಿತು ಎಂದು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಎಸ್‍ಎಸ್ ಹೈಟೆಕ್ ಆಸ್ಪತ್ರೆಯಿಂದ ರೈಲ್ವೆ ಮಾರ್ಗದಲ್ಲಿ ಬರುವ ರಾಜಕಾಲುವೆ ಮತ್ತು ದನವಿನ ಓಣಿಯನ್ನು ಈ ಹಿಂದೆ ಕೆಲವರು ಬೆಳೆ ಬೆಳೆಯಲು ಉಪಯೋಗಿಸಿಕೊಳ್ಳುತ್ತಿದ್ದರು. ಇದೀಗ ಬೆಳೆಯನ್ನು ತೆಗೆದಿದ್ದು, ನಿರಾಶ್ರಿತರು ತಮಗೆ ಸೂರು ಕಲ್ಪಿಸುವಂತೆ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡಿದ್ದರು. ಈ ಸ್ಥಳದಲ್ಲಿ 1 ಎಕರೆ 30 ಗುಂಟೆ ಜಮೀನಿದ್ದು, ಇದು ಹಳ್ಳದ ಖರಾಬ್ ಆಗಿದೆ. ಅದರಲ್ಲಿ ಯಾವುದೇ ವಸತಿ, ಸ್ಮಶಾನ ಇತರೆ ಉದ್ದೇಶಗಳಿಗೆ ಬಳಸಬಾರದೆಂದು ಸರ್ಕಾರಿ ಆದೇಶವಿದೆ. ಈ ಹಿಂದೆ ಸಭೆ ನಡೆಸಿ ನೋಟೀಸ್ ನೀಡಿ ಜಾಗವನ್ನು ತೆರವು ಮಾಡುವಂತೆ ಸೂಚಿಸಲಾಗಿದ್ದರೂ ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾಗ ತೆರವು ಮಾಡಲು ಕೆಲವು ದಿನಗಳ ಹಿಂದೆ ಕಾರ್ಯಾಚರಣೆಗೆ ಮುಂದಾಗಿದ್ದೆವು. ಆದರೆ ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಕೈಬಿಡಲಾಗಿತ್ತು. ಇಂದು ಅವುಗಳನ್ನು ತೆರವು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!