ನೀಟ್ ಪರೀಕ್ಷೆಯಲ್ಲಿನ ಲೋಪ ಸರಿಪಡಿಸಲು ಪ್ರಮೋದ್ ಮುತಾಲಿಕ್ ಆಗ್ರಹ
ದಾವಣಗೆರೆ, ಮಾ.3- ಏಪ್ರಿಲ್ ತಿಂಗಳಲ್ಲಿ ‘ಪಿ.ಎಫ್.ಐ ಸಂಘಟನೆ ನಿಷೇಧಿಸಿ’ ಎಂಬ ಹೋರಾಟವನ್ನು ಶ್ರೀರಾಮ ಸೇನೆ ಕೈಗೆತ್ತಿಕೊಳ್ಳಲಿದೆ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, 12 ರಾಜ್ಯಗಳಲ್ಲಿ ಪಿ.ಎಫ್.ಐ ಕೆಲಸ ಮಾಡುತ್ತಿದೆ. ಅದನ್ನು ನಿಷೇಧಿಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ಆಗ್ರಹಿಸಿವೆ, ಆದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಿದೆ. ಹೋರಾಟದ ವೇಳೆ ಅದನ್ನು ಬಯಲಿಗೆಳೆ ಯಲಾಗುವುದು ಎಂದು ಕಿಡಿಕಾರಿದರು.
ನೀಟ್ ಲೋಪ ಸರಿಪಡಿಸಿ: ಮೆಡಿಕಲ್ ಕಾಲೇಜುಗಳ ಪ್ರವೇಶ ಪಡೆಯಲು ಇರುವ ನೀಟ್ ಪರೀಕ್ಷೆಯಲ್ಲಿನ ಲೋಪ ಸರಿಪಡಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ
ಸೀಟುಗಳು ಸಿಗುವಂತೆ ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ವೈದ್ಯಕೀಯ ಕೋರ್ಸಿನ 40 ಸಾವಿರ ಸೀಟುಗಳಿಗೆ 11 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳೂ ಇರುವುದ ರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಹೀಗಾಗಿ ವಿದ್ಯಾರ್ಥಿಗಳು ಉಕ್ರೇನ್ ಇನ್ನಿತರೆ ದೇಶಗಳಿಗೆ ಓದಲು ಹೋಗುತ್ತಿದ್ದಾರೆ ಎಂದು ಹೇಳಿದರು.
ರಾಜಕಾರಣಿಗಳು ಹಾಗೂ ಕೆಲವು ಸ್ವಾಮೀಜಿಗಳು ಖಾಸಗಿ ಮೆಡಿಕಲ್ ಕಾಲೇಜುಗಳನ್ನು ನಡೆಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಇವರ ಜೊತೆ ಸರ್ಕಾರ ಕೈಜೋಡಿಸಿದೆ. ಇದರಿಂದಾಗಿ ಕೋಟ್ಯಂತರ ರೂ.ಗಳ ಲೂಟಿ ನಡೆಯುತ್ತಿದೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಹರಿಹರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ: ಹಿಜಾಬ್ ವಿವಾದದ ಸಂದರ್ಭದಲ್ಲಿ ಜಿಲ್ಲೆಯ ನಲ್ಲೂರು, ಹರಿಹರ, ಮಲೇಬೆನ್ನೂರುಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದ್ದು, ಪೊಲೀಸರು ತಾರತಮ್ಯ ಮಾಡಿದ್ದಾರೆ. ಹರಿಹರದಲ್ಲಿ ಅಮಾಯಕ ಯುವಕನ ಮೇಲೆ ಹಲ್ಲೆ ನಡೆದಿದ್ದರೆ, ಅಲ್ಲಿನ ಶಾಸಕರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ಮುತಾಲಿಕ್, ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.
ಉಕ್ರೇನ್‌ನಲ್ಲಿ ಬಾಂಬ್ ದಾಳಿಯಲ್ಲಿ ಸಾವಿಗೀಡಾದ ವಿದ್ಯಾರ್ಥಿ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರಬೇಕು. ನವೀನ್ ಅಣ್ಣನಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡರಾದ ಮಣಿ ಸರ್ಕಾರ್, ಪರಶುರಾಮ ನಡುಮನಿ, ಆಲೂರು ರಾಜಶೇಖರ್, ಶ್ರೀಧರ್, ರಮೇಶ್, ವೆಂಕಟೇಶ್, ರಾಹುಲ್, ವಿನೋದ್ ಇದ್ದರು.