ಕುರುವತ್ತಿಯಲ್ಲಿ ವಿಜೃಂಭಣೆಯ ರಥೋತ್ಸವ

ಹೂವಿನಹಡಗಲಿ, ಮಾ.2- ತಾಲ್ಲೂಕಿನ ಐತಿಹಾಸಿಕ ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಭಕ್ತ ಸಾಗರದ ನಡುವೆ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು 

ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಮೊದಲಾದೆಡೆಯಿಂದ  ಆಗಮಿಸಿದ್ದ ಭಕ್ತರು, ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.  ವಾಹನಗಳು ಕುರುವತ್ತಿ ಗ್ರಾಮ ಪ್ರವೇಶಿಸದಂತೆ ಪೋಲಿಸರು  ಬಂದೋಬಸ್ತ್ ಏರ್ಪಡಿಸಿದ್ದರು. ಇದರಿಂದಾಗಿ ಬಹುತೇಕ ಭಕ್ತರು 2 ಕಿಲೋ ಮೀಟರ್ ದೂರದಿಂದಲೇ ಪಾದಯಾತ್ರೆ ಮೂಲಕ ಆಗಮಿಸಿದರು.

ಕುರುವತ್ತಿ ಗ್ರಾಮದಲ್ಲಿ ಯಾವುದೇ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶವಿರ ಲಿಲ್ಲ. ಕುರುವತ್ತಿ ಗ್ರಾಮ ಪ್ರವೇಶಿಸಲು ಮೈಲಾರದಿಂದ ಏಕಮುಖ ರಸ್ತೆ ಮಾತ್ರ ಇರುವುದರಿಂದ ಪ್ರತಿ ವರ್ಷ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಆದರೆ  ಈ ಬಾರಿ  ವಾಹನಗಳ ದಟ್ಟಣೆ ಇಲ್ಲದೆ ಪ್ರತಿಯೊಬ್ಬರಿಗೂ  ತೇರು ಕಾಣುವಂತಾಗಿತ್ತು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್. ಪ್ರಕಾಶರಾವ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುವರ್ಣಮ್ಮ, ಉಪಾಧ್ಯಕ್ಷೆ ದೇವಕ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುತ್ತೆಪ್ಪ ತಳವಾರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. 

ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು,  ಎತ್ತುಗಳು ಮತ್ತು ವಾಹನಗಳನ್ನು ತೊಳೆಯಲು ಅವಕಾಶ ನೀಡಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಿದ್ದ ಜಿಲ್ಲಾಡಳಿತ ಕೊನೇ ಗಳಿಗೆಯಲ್ಲಿ ರಥೋತ್ಸವಕ್ಕೆ  ರಿಯಾಯಿತಿ ತೋರಿದ್ದರಿಂದ ಭಕ್ತ ಸಾಗರವೇ ಜಮಾವಣೆಯಾಗಿತ್ತು.

error: Content is protected !!