ಜಾತಿ ವ್ಯವಸ್ಥೆ, ಮೆಡಿಕಲ್ ಡೊನೇಷನ್ ಬದಲಿಸಿ

ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಒದಗಿಸಲು ಪ್ರಧಾನಿಗೆ ನವೀನ್ ತಂದೆ ಮನವಿ

ಹಾವೇರಿ, ಮಾ. 1 – ಡೊನೇಷನ್ ಕಾರಣದಿಂದ ದುಬಾರಿಯಾದ ವೈದ್ಯಕೀಯ ಶಿಕ್ಷಣ ಹಾಗೂ ಜಾತಿ ವ್ಯವಸ್ಥೆಯಿಂದಾಗಿ ಭಾರ ತದ ವಿದ್ಯಾರ್ಥಿಗಳು ಮೆಡಿಕಲ್ ಕಲಿಯಲು ವಿದೇಶಗಳಿಗೆ ಹೋಗುವಂತಾಗಿದೆ. ಭಾರತ ದಲ್ಲೇ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಒದಗಿಸಿ ಎಂದು ಉಕ್ರೇನ್‌ನಲ್ಲಿ ಪುತ್ರ ನವೀನ್ ಕಳೆದುಕೊಂಡ ದುಃಖದಲ್ಲಿರುವ ತಂದೆ ಶೇಖರಪ್ಪ ಗ್ಯಾನಗೌಡರ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೈಗೆ ಬಂದ ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ, ಉಕ್ರೇನ್‌ನಲ್ಲಿರುವ ಇತರೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಅವರು, ಅಲ್ಲಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ.

ನನ್ನ ಮಗ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಪಡೆದಿದ್ದ. ಆದರೆ, ನಮ್ಮ ಜಾತಿಯ ಕಾರಣದಿಂದ ವೈದ್ಯಕೀಯ ಸೀಟು ಪಡೆಯಲು ಆಗಲಿಲ್ಲ. ಖಾಸಗಿ ನಿಯಂತ್ರಣದಲ್ಲಿರುವ ಸೀಟುಗಳನ್ನು ಪಡೆಯಲು 1-2 ಕೋಟಿ ರೂ. ಡೊನೇಷನ್ ಕೇಳಿದರು. ಎಷ್ಟೇ ಪ್ರಯತ್ನ ಪಟ್ಟರೂ ಭಾರತದಲ್ಲಿ ಸೀಟು ಸಿಗಲಿಲ್ಲ ಎಂದವರು ತಮಗೆ ಎದುರಾದ ಕಷ್ಟ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಉಕ್ರೇನ್‌ನಲ್ಲಿ ಇಲ್ಲಿಗಿಂತ ಉತ್ತಮ ಉಪಕರಣಗಳು, ಇಲ್ಲಿಗಿಂತ ಉತ್ತಮ ಕಲಿಕಾ ವ್ಯವಸ್ಥೆ ಕಡಿಮೆ ವೆಚ್ಚದಲ್ಲಿ ದೊರೆಯಿತು. ಹೀಗಿರುವಾಗ ಡೊನೇಷನ್‌ಗೆ ಏಕೆ ಹಣ ಕೊಡಬೇಕು ಎಂದು ವಿದೇಶಕ್ಕೆ ಮಗನನ್ನು ಕಳಿಸಿದ್ದಾಗಿ ಅವರು ಹೇಳಿದರು.

ನನ್ನ ಮಗ ಎಂದೂ ಮನೆ ಪಾಠಕ್ಕೆ ಹೋಗಿರಲಿಲ್ಲ. ಎಸ್.ಎಸ್.ಎಲ್.ಸಿ.ಯಲ್ಲಿ ಶೇ.96 ಹಾಗೂ ಪಿ.ಯು.ಸಿ.ಯಲ್ಲಿ ಶೇ.97ರಷ್ಟು ಅಂಕ ಪಡೆದಿದ್ದ. ವೈದ್ಯನಾಗಬೇಕು ಎಂಬುದು ಹತ್ತನೇ ತರಗತಿಯಿಂದಲೂ ಅವನ ಕನಸಾಗಿತ್ತು ಎಂದು ಶೇಖರಪ್ಪ ತಿಳಿಸಿದ್ದಾರೆ.

ಇಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಜಾತಿ ವ್ಯವಸ್ಥೆಯಿಂದಾಗಿ ಅವನು ಬುದ್ಧಿವಂತನಾಗಿ ದ್ದರೂ ಸೀಟು ಸಿಗಲಿಲ್ಲ. ಖಾಸಗಿಯಲ್ಲಿ
ಎಂ.ಬಿ.ಬಿ.ಎಸ್. ಸೀಟು ಪಡೆಯಲು 1-2 ಕೋಟಿ ರೂ. ಡೊನೇಷನ್ ನೀಡಬೇಕಾಗಿತ್ತು ಎಂದವರು ಹೇಳಿದ್ದಾರೆ.

ರಾಜಕೀಯ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಹಾಗೂ ಜಾತಿ ವ್ಯವಸ್ಥೆಯಿಂದ ಬೇಸರವಾಗಿದೆ. ಎಲ್ಲವೂ ಖಾಸಗಿಯವರ ನಿಯಂತ್ರಣದಲ್ಲಿದೆ. ಕೆಲವೇ ಲಕ್ಷಗಳಿಗೆ ಸಿಗುವಂತಹ ವೈದ್ಯಕೀಯ ಶಿಕ್ಷಣಕ್ಕೆ ಕೋಟಿಗಳನ್ನು ಏಕೆ ಕೊಡಬೇಕು? ಎಂದವರು ಹೇಳಿದ್ದಾರೆ.

ನನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು ನವೀನ್‌ನನ್ನು ಉಕ್ರೇನ್‌ಗೆ ಕಳಿಸಿದ್ದೆ ಎಂದವರು ಹೇಳಿದ್ದಾರೆ.

ಖಾಸಗಿ ವಲಯದಲ್ಲೂ ಸಹ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ದೊರೆಯುವಂತೆ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಾನು ಮನವಿ ಮಾಡಿಕೊಂಡಿದ್ದೇನೆ. ಕನಿಷ್ಠ ಇನ್ನು ಮುಂದೆಯಾದರೂ ಈ ದಿಕ್ಕಿನಲ್ಲಿ ಕಾರ್ಯ ನಿರ್ವಹಿಬೇಕಿದೆ ಎಂದಿದ್ದಾರೆ.

error: Content is protected !!