ಉಕ್ಕಡಗಾತ್ರಿ ಜಾತ್ರೆಗೆ ಶ್ರೀಗಳ ಚಾಲನೆ

ಮಲೆಬೆನ್ನೂರು, ಮಾ.2- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಬುಧವಾರದಿಂದ ಒಂದು ವಾರ ಕಾಲ ಜರುಗುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನಂದಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ನಂತರ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಗಳು, ಸುಕ್ಷೇತ್ರಕ್ಕೆ ಬರುವ ಭಕ್ತರು ಸ್ವಚ್ಛತೆ ಕಾಪಾಡಬೇಕು ಎಂದು ತಿಳಿ ಹೇಳಿದರು. 

ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ, ಹರಕೆ ಸಮರ್ಪಕವಾಗಿ ಬಳಕೆ ಆಗುತ್ತಿರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ನಡೆಯುತ್ತಿವೆ. ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹಕ್ಕೆ ಒತ್ತು ನೀಡಲಾಗಿದ್ದು, ಈಗಿರುವ ಪ್ರಾಥಮಿಕ, ಪ್ರೌಢ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣಕ್ಕೂ ಗಮನ ಹರಿಸಬೇಕು ಎಂದು ಟ್ರಸ್ಟಿಗಳಿಗೆ ಸಲಹೆ ನೀಡಿದರು.  ಉಕ್ಕಡಗಾತ್ರಿ ಭವ ರೋಗ ಪರಿಹರಿಸುವ ಕೇಂದ್ರವಾಗಿದ್ದು, ಜನರ ಭಾವನೆಗಳಿಗೆ ಪೂರಕವಾಗಿ ಅಜ್ಜಯ್ಯನ ಆಶೀರ್ವಾದ ಸಿಗಲಿದೆ ಎಂದು ಸ್ವಾಮೀಜಿ ಹೇಳಿದರು. 

ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,   ರಾಜಗೋಪುರದ ಬುನಾದಿ ಕೆಲಸ ಪೂರ್ಣಗೊಂಡಿದ್ದು, ಮುಂದಿನ ಜಾತ್ರೆ ವೇಳೆಗೆ ರಾಜಗೋಪುರ ಸಿದ್ಧಗೊಳ್ಳುವ ವಿಶ್ವಾಸವಿದೆ. ಜೊತೆಗೆ 3 ಕೆಜಿ ತೂಕದ ಬಂಗಾರದ ಕಿರೀಟವನ್ನು ಅಜ್ಜಯ್ಯನಿಗೆ ಮಾಡಿಸುವ ಗುರಿ ಇದೆ ಎಂದು ತಿಳಿಸಿದರು.

ಜಾತ್ರೆ ವೇಳೆ ಭಕ್ತರು ದೇವರ ಫೋಟೋಗಳನ್ನು ಮತ್ತು ಬಟ್ಟೆಗಳನ್ನು ಎಲ್ಲೆಂದರಲ್ಲಿ ಹಾಕಬೇಡಿ ಕೇಳಿಕೊಂಡರು.

ಟ್ರಸ್ಟ್ ಕಮಿಟಿ ಸದಸ್ಯ ನಾಗರಾಜ್ ದಿಲ್ಲಿವಾಲ, ಗದ್ದಿಗೆಯ ಪಾಟೀಲ, ಪ್ರಕಾಶ್, ಕೊಟ್ರೇಶ್, ಕರಿಬಸಪ್ಪ ಹೋಟೋರಿ, ಈರನಗೌಡ, ಗದಿಗೆಪ್ಪ ಹೊಸಳ್ಳಿ, ಬಸವರಾಜ್, ಹನುಮನಗೌಡ, ಶಿವಪೂಜೆ, ಬಸವನಗೌಡ ಪಾಳೇದ್, ಸಿದ್ಧಲಿಂಗಪ್ಪ, ಮುಖಂಡರಾದ ಶಿವಣ್ಣ, ಮೈಸೂರಿನ ಮಂಜೇಗೌಡ ಹಾಗೂ ಗ್ರಾ.ಪಂ. ಸದಸ್ಯರು ವೇದಿಕೆಯಲ್ಲಿದ್ದರು.

ದೇವಸ್ಥಾನದ ಅರ್ಚಕರು ವೇದಘೋಷದ ಮೂಲಕ ಪ್ರಾರ್ಥಿಸಿದರು. ಶಿಕ್ಷಕ ಚಕ್ರಸಾಲಿ ಸ್ವಾಗತಿಸಿದರು. ಎಸ್.ಬಿ. ಹಿತ್ತಲಮನಿ ನಿರೂಪಿಸಿದರೆ, ವಿವೇಕಾನಂದ ವಂದಿಸಿದರು.

ಬೆಳಗ್ಗೆ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಕ್ಷೇತ್ರದಲ್ಲಿ ವಿದ್ಯುತ್   ದೀಪಾಲಂಕಾರ ಮತ್ತು ಹೂವಿನ ಅಲಂಕಾರ ಗಮನ ಸೆಳೆಯಿತು. ಗುರುವಾರ ಬೆಳಗ್ಗೆ  ಅಜ್ಜಯ್ಯನ ಮಜಾಭಿಷೇಕ ನಡೆಯಲಿದೆ.

error: Content is protected !!