ದಾವಣಗೆರೆ, ಮಾ. 2- ಪ್ರಸಕ್ತ ವರ್ಷದಲ್ಲಿ 1.5 ಲಕ್ಷ ಪೋಸ್ಟ್ ಆಫೀಸ್‌ಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ಬರಲಿವೆ ಎಂದು ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್.ಎಂ.ಎಸ್. ಬ್ಯಾಂಕಿಂಗ್ ಮುಖಾಂತರ ಖಾತೆಗಳ ಆನ್‍ಲೈನ್ ನಿರ್ವಹಣೆಯ ಅವಕಾಶದ ಜೊತೆಗೆ ಪೋಸ್ಟ್ ಆಫೀಸಿನ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್‍ಲೈನ್ ಹಣ ವರ್ಗಾವಣೆಯ ಅನುಕೂಲವೂ ಸಾಧ್ಯವಾಗಲಿದೆ, ಜೊತೆಗೆ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಾಯವಾಗಲಿದೆ.
ಕೇಂದ್ರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಫೆ.23 ರಂದು ಬಜೆಟ್ ಘೋಷಣೆಯ ಅನುಷ್ಠಾನದ ಕುರಿತು ಅಂಚೆ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ ವೆಬಿನಾರ್ ಒಂದನ್ನು ಆಯೋಜಿಸಿತ್ತು.
ಕರ್ನಾಟಕ ಅಂಚೆ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಸಹ ಈ ವೆಬಿನಾರ್‍ನಲ್ಲಿ ಭಾಗವಹಿಸಿದ್ದರು.
ಸಭೆಯನ್ನು ಪ್ರಧಾನಿ ಉದ್ಘಾಟಿಸಿದರು. ಸಭೆಯಲ್ಲಿ ಪ್ರಸ್ತಾಪಗೊಂಡ ಮುಖ್ಯಾಂಶಗಳು ಹೀಗಿವೆ: ಸರ್ಕಾರದ ಎಲ್ಲ ಸಂಸ್ಥೆಗಳು ಹಾಗೂ ಮಧ್ಯಸ್ಥಿಕೆದಾರರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಉದ್ದೇಶಕ್ಕಾಗಿ ಸಮನ್ವಯಗೊಳ್ಳಬೇಕಾದ ಅಗತ್ಯದ ಕುರಿತು ಹೆಚ್ಚಿನ ಒತ್ತು ನೀಡಲಾಯಿತು.
ಗ್ರಾಮೀಣ ಭಾಗದ ಡಿಜಿಟಲ್ ಆರ್ಥಿಕ ಒಳಗೊಳ್ಳುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಗಮನ ಹರಿಸಿ, ಜಾಗೃತಿ ಮೂಡಿಸುವ ಮುಂದಾಳತ್ವವನ್ನು ಅಂಚೆ ಇಲಾಖೆಯು ನಿರ್ವಹಿಸಬೇಕಿದೆ.
ಹಳ್ಳಿಗಳಲ್ಲಿರುವ ಅಂಚೆ ಕಚೇರಿಯ ಶಾಖೆಗಳನ್ನು ಸೇರಿಸಿ ಎಲ್ಲ ಅಂಚೆ ಕಚೇರಿಗಳು ಕೋರ್ ಬ್ಯಾಂಕಿಂಗ್‍ನ ಅಡಿಯಲ್ಲಿ ಬರಬೇಕು. ಆನ್‍ಲೈನ್ ಹಣ ವರ್ಗಾವಣೆ ಸೇರಿದಂತೆ ಉಳಿದೆಲ್ಲ ಸೌಲಭ್ಯಗಳು ದೇಶದ ಮೂಲೆ, ಮೂಲೆಗಳನ್ನು ತಲುಪಬೇಕು.
ಸಣ್ಣ ಉಳಿತಾಯದ ಪ್ರತಿನಿಧಿಗಳು, ಮಹಿಳಾ ಪ್ರಧಾನ ಕೇಂದ್ರೀಯ ಬಚತ್ ಯೋಜನೆ ಪ್ರತಿನಿಧಿಗಳು, ಅಂಚೆ ಉಳಿತಾಯ ಖಾತೆದಾರರು, ಸ್ವ-ಸಹಾಯ ಸಂಘಗಳು ಮತ್ತು ಬ್ಯಾಂಕಿಂಗ್ ತಜ್ಞರ ಅಭಿಪ್ರಾಯಗಳನ್ನು ಈ ವೆಬಿನಾರ್‍ನಲ್ಲಿ ತೆಗೆದುಕೊಳ್ಳಲಾಯಿತು.
ಕರ್ನಾಟಕದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 28 ಲಕ್ಷ ಫಲಾನುಭವಿಗಳಿಗೆ ಅಂಚೆ ಖಾತೆಯ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ತಲುಪಿಸಲಾಗಿದೆ. ರಾಜ್ಯ ಸರ್ಕಾರದೊಟ್ಟಿಗೆ ಕೈ ಜೋಡಿಸಿ, ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ 1,56,056 ಸುಕನ್ಯಾ ಸಮೃದ್ಧಿ ಖಾತೆ ತೆರೆಯಲಾಗಿದೆ.
ಜನಸೇವೆಗೆ ಕರ್ನಾಟಕ ಅಂಚೆ ವಲಯ ಕಂಕಣಬದ್ಧವಾಗಿದೆ ಎಂದು ರಾಜೇಂದ್ರಕುಮಾರ್ ತಿಳಿಸಿದ್ದಾರೆ.