ಕೊಡದಗುಡ್ಡಕ್ಕೆ 2.20 ಕೋ. ರೂ. ವೆಚ್ಚದ ಗುಣಾತ್ಮಕ ರಸ್ತೆ ಅಭಿವೃದ್ಧಿ

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಮಾ.1- ನೆರೆಹೊರೆಯ ತಾಲ್ಲೂಕು ಮತ್ತು ಜಿಲ್ಲೆಗಳ ಆರಾಧ್ಯ ದೈವ ಕೊಡದಗುಡ್ಡದ ವೀರಭದ್ರೇಶ್ವರ ದೇವಸ್ಥಾನಕ್ಕೆ   2 ಕೋ. 20 ಲಕ್ಷ ವೆಚ್ಚದಲ್ಲಿ ಗುಣಾತ್ಮಕ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ತಾಲ್ಲೂಕಿನ ಕೊಡದಗುಡ್ಡ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸಿಸಿ ಮತ್ತು ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ವರ್ಷದಲ್ಲಿ ಚಾಲನೆ ನೀಡಬೇಕಿದ್ದ  ಕಾಮಗಾರಿಗೆ ಸ್ಥಳೀಯ ಕೆಲವು ಮುಖಂಡರ ಅಡ್ಡಿಯಿಂದ ಹಿನ್ನಡೆಯಾಗಿತ್ತು. ಇದೀಗ ಚಾಲನೆ ಸಿಕ್ಕಿರುವುದು ಸಂತಸಕರ ಸಂಗತಿ ಎಂದರು.

ಕೂಡ್ಲಿಗಿ, ಚಳ್ಳಕೆರೆ, ದಾವಣಗೆರೆ, ಕೊಟ್ಟೂರು, ಹರಪನಹಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರತಿ ವರ್ಷ ಸಹಸ್ರಾರು ಭಕ್ತರು ವೀರಭದ್ರೇಶ್ವರ ರಥೋತ್ಸವಕ್ಕೆ ಆಗಮಿಸಿ, ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ರಸ್ತೆ, ಮೂಲಸೌಕರ್ಯ ಒದಗಿಸುವುದು ಸ್ಥಳೀಯರ ಜವಾಬ್ದಾರಿಯಾಗಿದೆ. ದೇವಾಲಯಗಳ ಅಭಿವೃದ್ಧಿ ಕಾರ್ಯಕ್ಕೆ ಪಕ್ಷಾತೀತವಾಗಿ ಕೈಜೋಡಿಸಬೇಕು  ಎಂದರು.

ಹಣ ಪಡೆದ ಆರೋಪದಲ್ಲಿ ಹುರುಳಿಲ್ಲ:  ನಾನು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಹಣ ಪಡೆದ ಆರೋಪಗಳು ಮಾಡುತ್ತಿರುವವರಿಗೆ ಸಭೆಯಲ್ಲಿ ಕುಳಿತು ಉತ್ತರಿಸುವೆ. ಪ್ರೀತಿಯಿಂದ ಗೆಲ್ಲುವೆ, ದ್ವೇಷದ ರಾಜಕಾರಣ ನನಗೆ ಬೇಕಿಲ್ಲ.ಕಾಮಗಾರಿ ನಿಲ್ಲಿಸುವ ಶಕ್ತಿ ಇದ್ದರೆ ನಾನೂ ಎದುರಿಸುವೆ ಎಂದು ಸವಾಲು ಹಾಕಿದರು.

ದೇವಿಕೆರೆ ಗ್ರಾಮ ಪಂಚಾಯಿತಿಗೆ   ಶಾಂತಿಯ ಸಂಕೇತವಾದ ಬುದ್ಧನ ಪ್ರತಿಮೆಯನ್ನು  ಕೊಡುಗೆಯಾಗಿ ನೀಡಿರುವೆ. ಅಶಾಂತಿ ಉಂಟು ಮಾಡುವವರ ಮನಸ್ಸು ಬದಲಾಗಿ ಒಳ್ಳೆ ಮನಸ್ಸು ಮೂಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ  ತಹಶೀಲ್ದಾರ್ ಸಂತೋಷ್ ಕುಮಾರ್,  ಬಿಜೆಪಿ ಮಂಡಲ ಅಧ್ಯಕ್ಷ  ಹೆಚ್.ಸಿ. ಮಹೇಶ್, ಪ.ಪಂ ಅಧ್ಯಕ್ಷ ಎಸ್‌. ಸಿದ್ದಪ್ಪ, ಗ್ರಾ.ಪಂ ಅಧ್ಯಕ್ಷ ಸದಾಶಿವಪ್ಪ, ಸದಸ್ಯರಾದ ಗುರುಸ್ವಾಮಿ, ನೀಲಮ್ಮ, ಹನುಮಂತಪ್ಪ, ಮುಖಂಡರಾದ ಕಲ್ಲೇಶ್, ಮಲ್ಲೇಶ್, ಗುತ್ತಿಗೆದಾರ ಪ್ರದೀಪ್ ಪಟೇಲ್, ಮಲ್ಲಿಕಾರ್ಜುನ್, ಚನ್ನಯ್ಯ, ರುದ್ರಸ್ವಾಮಿ, ಚಂದ್ರಶೇಖರ್, ಶಿವಕುಮಾರ ಸ್ವಾಮಿ ಮುಂತಾದವರು ಇದ್ದರು.

error: Content is protected !!