ದೇವನಗರಿಯಲ್ಲಿ ಶಿವಧ್ಯಾನ

ಸಂಭ್ರಮದ ಶಿವರಾತ್ರಿ ಆಚರಣೆ, ಶಿವನಿಗೆ ವಿಶೇಷ ಪೂಜೆ 

ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು

ದಾವಣಗೆರೆ, ಮಾ.1- ನಗರ ಸೇರಿದಂತೆ ಜಿಲ್ಲೆಯಲ್ಲೆಡೆ ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿ  ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಶಿವರಾತ್ರಿ ಅಂಗವಾಗಿ  ಶಿವನ ದೇವಾಲಯಗಳನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ  ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಶಿವನ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಹೋಮಗಳು ನಡೆದವು. ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. 

ಮನೆಗಳಲ್ಲಿ ಅಭಿಷೇಕ ನಡೆಸಿ,  ವಿಶೇಷ ಪೂಜೆಯ ಮೂಲಕ  ಶಿವನನ್ನು ಆರಾಧಿಸಿದ ಭಕ್ತರು, ಮುಂಜಾನೆಯಿಂದಲೇ ಕುಟುಂಬ ಸಹಿತ ಶಿವನ ದೇವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಒಂದೆಡೆ ಓಂಕಾರದ ಝೇಂಕಾರ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಓಂ ನಮಃ ಶಿವಾಯ ಮಂತ್ರ ಪಠಣ ನಡೆಯುತ್ತಿದ್ದರೆ, ಇತ್ತ ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಣ್ಣು ಹಂಪಲು ಖರೀದಿ ನಡೆಯುತ್ತಲೇ ಇತ್ತು.

ಸಂಜೆಯಾಗುತ್ತಲೇ ಶಿವಾಲಯಗಳ ಮುಂದೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತ್ತು. ಸುಮಾರು ದೂರ ಸರದಿಯಲ್ಲಿ ತಾಳ್ಮೆಯಿಂದಲೇ ನಿಂತು ದರ್ಶನ ಪಡೆಯುತ್ತಿದ್ದುದು ಎಲ್ಲೆಡೆ ಕಾಣ ಸಿಗುತ್ತಿದ್ದ ದೃಶ್ಯವಾಗಿತ್ತು. ತಡರಾತ್ರಿವರೆಗೂ ಸರದಿ ಸಾಲು ಮುಂದುವರೆದಿತ್ತು. ಹಲವೆಡೆ ದೇವಸ್ಥಾನಗಳಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವನಗರಿಯಲ್ಲಿ ಶಿವಧ್ಯಾನ - Janathavani

ಮಂಗಳವಾರವೂ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಮಾರಾಟದ ಭರಾಟೆ ಹೆಚ್ಚಾಗಿತ್ತು. ವಿಶೇಷವಾಗಿ ಖರಬೂಜ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ಕಾಣಸಿಗುತ್ತಿತ್ತು.  ಶಿವನ ಪೂಜೆ, ಅಭಿಷೇಕಕ್ಕೆ ಬೇಕಾದ ಅರ್ಘ್ಯ, ಬಿಲ್ವಪತ್ರೆ ಇತರೆ ವಸ್ತುಗಳನ್ನು ಕೆಲವು ಭಕ್ತರು ಉಚಿತವಾಗಿ ವಿತರಿಸಿದರು.

ನಗರದ ಗೀತಾಂಜಲಿ ಚಿತ್ರಮಂದಿರದ ಪಕ್ಕದಲ್ಲಿನ  ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಶಿವನ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆಯಿಂದ ತಡ ರಾತ್ರಿ ವರೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. 

ನಗರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು. ಪಿ.ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಪುಷ್ಪಾಲಂಕಾರ ನಡೆಯಿತು. ಸಂಜೆ ಜಾಗರಣೆ ನಂತರ ಫಲಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.  ಬುಧವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಇದೆ. 

ಹೊಂಡದ ವೃತ್ತಕ್ಕೆ ಸಮೀಪದ ಶ್ರೀ  ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲೂ ಮುಂಜಾನೆ ವಿಶೇಷ ಪೂಜಾದಿ ಕಾರ್ಯಗಳು ನಡೆದವು. ಸಂಜೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. 

ವಿದ್ಯಾನಗರದ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಮುಂಜಾನೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಲಕ್ಷ ಬಿಲ್ವಾರ್ಚನೆ ನಡೆಯಿತು ಸಂಜೆ ಯಿಂದ ತಡ ರಾತ್ರಿಯವರೆಗೆ ಸಂಗೀತ ಕಾರ್ಯಕ್ರಮಗಳು ನಡೆದವು.

ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಅಭಿಷೇಕ, ವಿಶೇಷ ಅಲಂಕಾರ ನಡೆಯಿತು. ರಾತ್ರಿ ಅಖಂಡ ಭಜನೆ ನಡೆಯಿತು. ಇಂದು ಬೆಳಿಗ್ಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಯದೇವ ವೃತ್ತದಲ್ಲಿರುವ ಕೂಡಲಿ ಶೃಂಗೇರಿ ಜಗದ್ಗುರು ಮಹಾಸಂಸ್ಥಾನ ಶಾಖಾ ಮಠ ದಲ್ಲಿ ಶಿವರಾತ್ರಿ ಅಂಗವಾಗಿ ಸಂಜೆ 6 ರಿಂದ  4  ಯಾಮ ಗಳಲ್ಲಿ ನಿರಂತರ ಅಭಿಷೇಕ ಏರ್ಪಡಿಸಲಾಗಿತ್ತು. ಸಂಜೆ  ಭಕ್ತರಿಗೆ ಅಭಿಷೇಕಕ್ಕೆ ಅವಕಾಶ ನೀಡಲಾಗಿತ್ತು.

ಪಿ.ಜೆ. ಬಡಾವಣೆಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಸರಸ್ವತಿ ನಗರದ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಜಾಗರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿನೋಬನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಿತು. ಸಂಜೆಯಿಂದ ಸ್ವಾಮಿಯ ದಿವ್ಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.  ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಶ್ರೀ ಸೋಮೇಶ್ವರ ದೇವರ ಬೆಳ್ಳಿ ಮುಖದ ಧಾರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಪೂಜೆಗಳು ನಡೆದವು. 

ಎಸ್.ಕೆ.ಪಿ. ರಸ್ತೆಯ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಳ್ಹಾರ ವಿತರಣೆ, ಜಾಗರಣೆ ನಡೆಯಿತು. ಬುಧವಾರ ಸ್ವಾಮಿಯ ರಥೋತ್ಸವ, ಮೆರವಣಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ಇದೆ.

ಕೆ.ಟಿ.ಜೆ. ನಗರದ 2ನೇ ಕ್ರಾಸ್‌ನಲ್ಲಿರುವ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. 

error: Content is protected !!