ಜಲ ಯೋಜನೆಗಳ ಬದ್ಧತೆ ಇಲ್ಲದ ಬಿಜೆಪಿ ಪಶ್ಚಿಮವಾಹಿನಿ ಬಗ್ಗೆ ಸ್ಪಷ್ಟತೆ ಮೂಡಿಸಲಿ

ಜಲ ಯೋಜನೆಗಳ ಬದ್ಧತೆ ಇಲ್ಲದ ಬಿಜೆಪಿ ಪಶ್ಚಿಮವಾಹಿನಿ ಬಗ್ಗೆ ಸ್ಪಷ್ಟತೆ ಮೂಡಿಸಲಿ - Janathavaniದಾವಣಗೆರೆ, ಮಾ. 1 – 4,099 ಕೋಟಿ ರೂ.ಗಳ ಪಶ್ಚಿಮ ವಾಹಿನಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಗಳ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪಶ್ಚಿಮ ಘಟ್ಟಗಳಿಂದ ಬಯಲು ಸೀಮೆಗೆ ನೀರು ತರುವ ಯೋಜನೆ ಒಳ್ಳೆಯದೇ ಆದರೂ, ಆ ಬಗ್ಗೆ ಸ್ಪಷ್ಟನೆ ಬೇಕಿದೆ. ಯೋಜನೆಯ ಲಾಭ-ನಷ್ಟದ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದಿದ್ದಾರೆ.

ಮಹದಾಯಿ ಯೋಜನೆ 24 ಗಂಟೆಗಳಲ್ಲಿ ಜಾರಿಗೆ ತರುವು ದಾಗಿ ಹೇಳಿದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿದು ಮನೆ ಸೇರಿದರೂ ಯೋಜನೆ ಜಾರಿಯಾಗಿಲ್ಲ. ಮೇಕೆದಾಟು ಯೋಜನೆಗೆ ಡಬಲ್ ಇಂಜಿನ್ ಸರ್ಕಾರ ಪರಿಸರ ಅನುಮತಿ ಕೊಡುತ್ತಿಲ್ಲ. ಈಗ ಇದ್ದಕ್ಕಿದ್ದಂತೆ ಪಶ್ಚಿಮ ವಾಹಿನಿ ಯೋಜನೆಗೆ 4,099 ಕೋಟಿ ರೂ. ಯೋಜನೆ ರೂಪಿಸಿರುವುದಾಗಿ ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಮಾತಿಗೆ ಬದ್ಧತೆ ಇಲ್ಲ, ಅವರಿಗೆ ಜನಹಿತದ ಬದ್ಧತೆಯೂ ಇಲ್ಲ ಎಂದರು.

ಪಶ್ಚಿಮ ವಾಹಿನಿ ಯೋಜನೆಯಿಂದ ಎಷ್ಟು ನೀರು ಸಿಗಲಿದೆ ಎಂಬ ಬಗ್ಗೆ ಅಧ್ಯಯನ ನಡೆಸಿಲ್ಲ, ಜನಾಭಿಪ್ರಾಯವನ್ನೂ ಪಡೆದಿಲ್ಲ. ಯೋಜನೆಯ ಲಾಭ – ನಷ್ಟದ ಬಗ್ಗೆಯೂ ಜನರಿಗೆ ತಿಳಿಸಿಲ್ಲ. ಈ ಹಿಂದೆಯೂ ನೇತ್ರಾವತಿ ತಿರುವು ಮುಂತಾದ ಯೋಜನೆಗಳನ್ನು ಪ್ರಸ್ತಾಪಿಸಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಯೋಜನೆ ಕುರಿತು ಜನರಲ್ಲಿ ಸ್ಪಷ್ಟನೆ ಮೂಡಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು. ಮುಂಬರುವ ರಾಜ್ಯ ಬಜೆಟ್‌ನಲ್ಲಿ ದಕ್ಷಿಣದ ನದಿಗಳ ಜೋಡಣೆ, ಪಶ್ಚಿಮ ವಾಹಿನಿ ಯೋಜನೆ, ಮೇಕೆದಾಟು, ಮಹದಾಯಿ ಹಾಗೂ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳ ಸೇರಿದಂತೆ, ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಬೇಕು ಎಂದವರು ಒತ್ತಾಯಿಸಿದರು.

ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿ ದಕ್ಷಿಣದ ನದಿಗಳ ಜೋಡಣೆ ಯೋಜನೆ ಘೋಷಿಸಿದೆ. ಈ ಯೋಜನೆಯಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಆಂಧ್ರ ಹಾಗೂ ತಮಿಳುನಾಡುಗಳಿಗೇ ಹೆಚ್ಚು ಲಾಭವಾಗಲಿದೆ. ರಾಜ್ಯ ಕಡೆಗಣಿಸಿದರೂ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದವರು ಆಕ್ಷೇಪಿಸಿದರು.

ಮೇಕೆದಾಟು ಯೋಜನೆ ಜಾರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು. ಬೆಂಗಳೂರಿನ ಕುಡಿಯುವ ನೀರಿಗಾಗಿ ಯೋಜನೆಗೆ ಒಪ್ಪಿಗೆ ನೀಡುವಂತೆ ತಮಿಳುನಾಡಿನ ಮನವೊಲಿಸುವ ಮುತ್ಸದ್ಧಿತನ ತೋರಬೇಕು. ಅಂತಹ ತಾಕತ್ತು ಹಾಗೂ ಬದ್ಧತೆ ಮೋದಿಗೆ ಇಲ್ಲವೇ? ಎಂದು ಪ್ರಶ್ನಿಸಿದ ಉಗ್ರಪ್ಪ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಸೈಯದ್ ಸೈಫುಲ್ಲ, ಗಣೇಶ್ ಹುಲ್ಮನಿ, ವಿನಯ್ ಪೈಲ್ವಾನ್, ರಾಜು ಬೆಳ್ಳೂಡಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!