ಹೊನ್ನಾಳಿಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಆರಂಭ

ವಿವಿಧ ಇಲಾಖೆಗಳ 1576 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ : ಸಚಿವ ಅಶೋಕ್

ಹೊನ್ನಾಳಿ, ಫೆ. 28- ಜಿಲ್ಲಾ ಕೇಂದ್ರಗಳಲ್ಲಿ ಇರಬೇಕಿದ್ದ ಎಸಿ ಕಛೇರಿಯನ್ನು ಹೊನ್ನಾಳಿ ತಾಲ್ಲೂಕಿನಲ್ಲಿ  ಆರಂಭಿಸುತ್ತಿರುವುದರಿಂದ ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಸೌಲಭ್ಯ ಗಳನ್ನು ಸಾರ್ವಜನಿಕರು ತ್ವರಿತವಾಗಿ ಹಾಗೂ ಸಾರಿಗೆ ವೆಚ್ಚವಿಲ್ಲದೆ  ಪಡೆಯಬಹುದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಸೋಮವಾರ ತಾಲ್ಲೂಕು ಕಚೇರಿಯಲ್ಲಿರುವ ಮೇಲಂತಸ್ತಿನ ಕಟ್ಟಡದಲ್ಲಿ ನೂತನ ಎಸಿ ಕಚೇರಿ ಉದ್ಘಾಟಿಸಿ,  ಅಗಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸುಮಾರು 3,491 ಗ್ರಾಮಗಳ ಪೈಕಿ 1,035 ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಣೆ ಮಾಡಲಾಗಿದೆ. ಬೇಚಾರ್ ಗ್ರಾಮಗಳು ಎಂದರೆ ಈ ಗ್ರಾಮಗಳಲ್ಲಿ ನಾಗರೀಕ ಸೌಲಭ್ಯಗಳು ಸಿಗುವುದಿಲ್ಲ. ಕಾನೂನು ಬದ್ಧವಾಗಿ ರುವುದಿಲ್ಲ, ಹೀಗಾಗಿ ಅವರಿಗೆ ನಾಗರಿಕ ಸೌಲಭ್ಯಗಳನ್ನು ಕೊಡುವ ದೃಷ್ಟಿಯಿಂದ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತಿದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ 84 ಜನವಸತಿ ಪ್ರದೇ ಶಗಳ ಪೈಕಿ 39 ಗ್ರಾಮಗಳನ್ನು ಹೊಸ ಗ್ರಾಮಗಳ ನ್ನಾಗಿ ಸೃಷ್ಠಿ ಮಾಡಿ ಅವುಗಳಿಗೆ ಕಾನೂನು ಬದ್ಧ ಅಧಿಕಾರ ಕೊಡಲಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 5 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದರು.

ಖಾಲಿ ಡಬ್ಬ ಹೆಚ್ಚು ಸದ್ದು

ಕಾಂಗ್ರೆಸ್ಸಿನವರು ಕೈಗೊಂಡಿರುವ ಮೇಕೆದಾಟು ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ವಿಲ್ಲ, ಖಾಲಿ ಡಬ್ಬ ಹೆಚ್ಚು ಸದ್ದು ಮಾಡುವಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೌಂಡ್ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ಹೇಳಿದರು. ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ಸಿಗೆ ಬೇಕಿತ್ತಾ? ಎಂದು ಅಶೋಕ್ ಪ್ರಶ್ನಿಸಿದರು. 

ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕಿನ ಜನತೆ ಇನ್ನುಮುಂದೆ ದಾವಣಗೆರೆಗೆ ಹೋಗಬೇಕಾಗಿಲ್ಲ, ಇದರಿಂದ ಒಬ್ಬರಿಗೆ ಕನಿಷ್ಠ ಬಸ್ ಖರ್ಚು, ಊಟೋಪಚಾರ ಎಂದರೆ 200 ರೂ. ಉಳಿತಾಯವಾದಂತೆ ಎಂದರು.  ಅವಳಿ ತಾಲ್ಲೂಕಿನ  1576 ಜನರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. 

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಾವೊಬ್ಬ ಸಾಮಾನ್ಯ ಮುಖ್ಯಮಂತ್ರಿ ಎಂಬುದನ್ನು ಜಿರೋ ಟ್ರಾಫಿಕ್ ವ್ಯವಸ್ಥೆ ಬದಲಿಸಿ, ಸಾಮಾನ್ಯರಂತೆ ಪ್ರಯಾಣಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು. ಮುಂದಿನ ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ ಜನಪರವಾಗಲಿದೆ ಎಂದರು.  ಕೋವಿಡ್ ಸಂದರ್ಭದಲ್ಲಿ  23.48 ಕೋಟಿ ರೂ. ಹಣವನ್ನು ಕೊಟ್ಟಿದ್ದೇವೆ,  26,956 ಜನರಿಗೆ 29 ಕೋಟಿ ರೂ. ಹಣವನ್ನು ಬೆಳೆ ಪರಿಹಾರಕ್ಕೆ ಕೊಟ್ಟಿದ್ದೇವೆ ಎಂದ ಅವರು, ಬಿಪಿಎಲ್ ಕುಟುಂಬಕ್ಕೆ ಸೇರಿದ 214 ಜನರಿಗೆ ರೂ. 605 ಕೋಟಿ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಕಂದಾಯ ಇಲಾಖೆಗೆ ಹೊಸ ಆಯಾಮ ತಂದು ಕೊಟ್ಟವರು ಕಂದಾಯ ಸಚಿವ ಆರ್. ಅಶೋಕ್ ಎಂದು ಹೇಳಿದರು.

ಆರ್. ಅಶೋಕ್  ಕಡತ ಯಜ್ಞ ಎನ್ನುವ ನೂತನ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೆ ತರಲಿದ್ದಾರೆ. ಇದರಿಂದ ರಾಜ್ಯಲ್ಲಿರುವ ಸುಮಾರು 20 ಸಾವಿರ ಕಡತಗಳನ್ನು ಇತ್ಯರ್ಥ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.  

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಎಸಿ ಕಚೇರಿಯು ಎಂಟು ತಿಂಗಳುಗಳ ಹಿಂದೆಯೇ ಕಂದಾಯ ಸಚಿವರಿಂದ ಮಂಜೂರಾಗಿತ್ತು, ಸಣ್ಣಪುಟ್ಟ ತೊಡಕುಗಳನ್ನು ನಿವಾರಿಸಿ ಇಂದು ಅಧಿಕೃತವಾಗಿ ಉದ್ಘಾಟಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಎಸಿ ಕಚೇರಿ ಇಲ್ಲಿಯೇ ಆಗಿರುವುದರಿಂದ ಸಾರ್ವಜನಿಕರು, ರೈತರು, ವಕೀಲರು ತಮ್ಮ ಕೆಲಸ, ಕಾರ್ಯಗಳನ್ನು ಸುಲಭವಾಗಿ ಮತ್ತು ವೇಗವಾಗಿ ಮಾಡಿಸಿಕೊಳ್ಳಬಹುದು ಎಂದರು.

ಎಸಿ ಮಮತಾ ಹೊಸಗೌಡರ್, ಎಸ್‍ಪಿ ಸಿ.ಬಿ. ರಿಷ್ಯಂತ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಮೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್, ಸುಮಾ ರೇಣುಕಾಚಾರ್ಯ, ಚನ್ನಗಿರಿ ಡಿವೈಎಸ್‍ಪಿ ಸಂತೋಷ್ ಇತರರು ಉಪಸ್ಥಿತರಿದ್ದರು. ಎಸಿ ಹುಲ್ಮನಿ ತಿಮ್ಮಣ್ಣ ಸ್ವಾಗತಿಸಿದರು. ಬಿ. ಸೋಮಶೇಖರ್ ಶಿಕ್ಷಕರ ತಂಡ ನಾಡಗೀತೆ ಹಾಡಿತು. ಚೈತ್ರಾ  ನಿರೂಪಿಸಿದರು.

error: Content is protected !!