ಕಲಾಪಕ್ಕೆ ಅಡ್ಡಿ : ಹರಿಹರದಲ್ಲಿ ಬಿಜೆಪಿ ಪ್ರತಿಭಟನೆ

ಹರಿಹರ, ಫೆ. 28 – ವಿಧಾನಸಭೆ ಕಲಾಪಕ್ಕೆ ಅಡ್ಡಿ, ಹಿಜಾಬ್, ಮೇಕೆದಾಟು ವಿಷಯಗಳಲ್ಲಿ ಗೊಂದಲ ಸೃಷ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಇಲ್ಲಿನ ಬಿಜೆಪಿ ಕಚೇರಿಯಿಂದ ಹೊರಟು ಮುಖ್ಯ ರಸ್ತೆ ಮೂಲಕ ಪ್ರತಿಭಟನಾಕಾರರು ಗಾಂಧಿ ವೃತ್ತಕ್ಕೆ ಆಗಮಿಸಿ ಸಭೆ ನಡೆಸಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಮಾತನಾಡಿ, ವಿರೋಧ ಪಕ್ಷವಾದ ಕಾಂಗ್ರೆಸ್‍ನವರು ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ವಿನಾಕಾರಣ ವಿಧಾನಸಭೆ ಕಲಾಪಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರ ಕೋಟ್ಯಾಂತರ ರೂ. ವೆಚ್ಚವನ್ನು ನಿರುಪಯುಕ್ತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ವಿಷಯದಲ್ಲೂ ಕಾಂಗ್ರೆಸ್ ಧೋರಣೆ ಖಂಡನೀಯವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಹತ್ಯೆಯಾದ ಹಿಂದೂ ಪರ ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇಲ್ಲಿನ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪನವರೂ ಕೂಡ ಅಲ್ಪಸಂಖ್ಯಾತರನ್ನು ಓಲೈಸುವ ಭರಾಟೆಯಲ್ಲಿ ಹಿಂದೂ ಧರ್ಮ ವಿರೋಧಿ ಭಾವನೆ ಹೊರಹಾಕುತ್ತಿದ್ದಾರೆ. ಈ ಹಿಂದೆ ದೇವಸ್ಥಾನ ರಸ್ತೆಯಲ್ಲಿ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ರಾಮಪ್ಪನವರು ಹಿಂದೂ ಧರ್ಮ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆಂದು ಆರೋಪಿಸಿದರು.

ಎಸ್‍ಡಿಪಿಐ ಸಂಘಟನೆ ಅಪಾಯಕಾರಿಯಾಗಿದೆ. ಇಂತಹ ಇನ್ನೂ ಕೆಲವು ಸಂಘಟನೆಗಳಿದ್ದು ಅವುಗಳ ಚಲನವಲನದ ಕುರಿತು ಪೊಲೀಸರು ಗಮನಹರಿಸಬೇಕು. ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದವರನ್ನು ಹಾಗೂ ದೇಶ ವಿರೋಧಿ ಘೋಷಣೆ ಕೋಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

error: Content is protected !!