ದಾವಣಗೆರೆ, ಫೆ.28- ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಇಂದು ಏರ್ಪಾಡಾಗಿದ್ದ ಸಮಾರಂಭದಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಗೆ 30.65 ಲಕ್ಷ ರೂ. ವೆಚ್ಚದ ‘ಸ್ಮೈಲ್ ಆನ್ ರೋಟರಿ ಹಿಮೋಫಿಲಿಯಾ ಮೊಬೈಲ್ ಸರ್ವೀಸ್ ಅಂಬ್ಯುಲೆನ್ಸ್ ವಾಹನವನ್ನು ಶಾಸಕ ಎಸ್.ಎ. ರವೀಂದ್ರನಾಥ್ ಅಮೃತ ಹಸ್ತದಿಂದ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ರವೀಂದ್ರನಾಥ್, ಆರ್ಥಿಕವಾಗಿ ಸಬಲತೆ ಕಂಡಿರುವ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಸಮಾಜ ಸೇವೆ, ದಾನದ ಕಾರ್ಯಗಳಲ್ಲಿ ಮುಂದೆಯೂ ನಿರಂತ ರವಾಗಿ ತೊಡಗಿಕೊಂಡು ಸಮಾಜಮುಖಿ ಯಾಗಿ ಬೆಳೆಯಬೇಕು ಎಂದು ಆಶಿಸಿದರು.
ಸಂಸ್ಥೆಯಿಂದ ಹಸ್ತಾಂತರಿಸಿದ ನೂತನ ವಾಹನದಲ್ಲಿ ಎಲ್ಲಾ ತಾಂತ್ರಿಕತೆಯ ಸೌಲಭ್ಯಗಳನ್ನೂ ಕಲ್ಪಿಸಿ, ಸುಸ್ಥಿತಿಯಲ್ಲಿರಲು ಆದ್ಯತೆ ನೀಡಬೇಕು. ಬಡ ರೋಗಿಗಳಿಗೆ ಆರೋಗ್ಯ ಸೇವೆ ಸಿಗಲಿ ಎಂದು ಹಾರೈಸಿದರು.
ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಷಣ್ಮುಖಪ್ಪ ಮಾತನಾಡಿ, ರಕ್ತ ಹೆಪ್ಪುಗಟ್ಟದ ಲಕ್ಷಣವುಳ್ಳ ಹಿಮೋಫಿಲಿಯಾ ಬಾಧಿತರಿಗೆ ಅಗತ್ಯ ಔಷಧ ನೀಡಲು ಹೆಚ್ಚಿನ ವೆಚ್ಚವಾಗಲಿದೆ. ಸರ್ಕಾರ ನೀಡುತ್ತಿರುವ ಉಚಿತ ಔಷಧವನ್ನು ಹಿಮೋಫಿಲಿಯಾ ಸೊಸೈಟಿ ಮುಖಾಂತರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನೂತನ ವಾಹನ ಸೌಲಭ್ಯದಿಂದ ಹಿಮೋಫಿಲಿಯಾ ರೋಗಿಗಳಿದ್ದ ಸ್ಥಳಕ್ಕೆ ತೆರಳಿ ಅಗತ್ಯ ತುರ್ತು ಚಿಕಿತ್ಸೆ ನೀಡಬಹುದಾಗಿದೆ. ಕಾರ್ಗಿಲ್ ಸಂಸ್ಥೆಯಿಂದಲೂ ಆಸ್ಪತ್ರೆಗೆ ಕೆಲವು ಉಪಯುಕ್ತ ಯಂತ್ರೋಪಕರಣಗಳು ದೊರೆತಿವೆ ಎಂದು ತಿಳಿಸಿದರು.
ಕರ್ನಾಟಕ ಹಿಮೋಫಿಲಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಹೆಚ್.ಸಿ. ಸದಾಶಿವಪ್ಪ ಮಾತನಾಡಿ ಹಿಮೋಫಿಲಿಯಾ ರೋಗಿಗಳಿಗೆ ವಿದೇಶಗಳಿಂದ ಔಷಧ ಬರುತ್ತಿವೆ. ರೋಗಿಯ ದೇಹದ ತೂಕಕ್ಕೆ ತಕ್ಕಂತೆ ನೀಡಬೇಕಿರುವ ಔಷಧ ವೆಚ್ಚದಾಯಕವಾಗಿದೆ ಎಂದರು.
ಬಾಧಿತ ಮಕ್ಕಳ ಪಾಲನೆಗೆ ತಾಯಂದಿರು ಕಷ್ಟ ಪಡುವ ಸ್ಥಿತಿ ಇದೆ. ಚಿಕಿತ್ಸೆ ವೆಚ್ಚ ಭರಿಸಲಾಗದೆ ಕೆಲವರು ಸಾಮಾಜಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ರೋಗಪೀಡಿತರು ಅನೇಕ ಕಾರಣಗಳಿಂದ ರಕ್ತಸ್ರಾವಕ್ಕೆ ತುತ್ತಾಗಬಹುದು. ಇಂತಹವರ ತುರ್ತು ಚಿಕಿತ್ಸೆಗೆ ಈ ವಾಹನ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ತಿರುಪತಿ ನಾಯ್ಡು, ಮಾಜಿ ಗವರ್ನರ್ ನಾರಾಯಣಸ್ವಾಮಿ, ರೋಟರಿ ದಕ್ಷಿಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಸುಜಿತ್, ಮಾಜಿ ಅಧ್ಯಕ್ಷ ಎಚ್.ಜಿ.ಬಸವರಾಜ್, ಗ್ಲೋಬಲ್ ಗ್ರಾೃಂಟ್ ಸಮಿತಿ ಛೇರ್ಮನ್ ವಿಶ್ವಜಿತ್ ಜಾಧವ್ ಸೇರಿದಂತೆ ಇತರರಿದ್ದರು.