ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ಮಂದಕೃಷ್ಣ ಮಾದಿಗ ಬೇಸರ
ದಾವಣಗೆರೆ, ಫೆ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ, ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ರಚಿಸಿ ಪಡೆದ ವರದಿಗಳನ್ನು ಕಾಂಗ್ರೆಸ್ ಜಾರಿಗೊಳಿಸಲಿಲ್ಲ. ಬಿಜೆಪಿ ಕೂಡ ಅದೇ ಚಾಳಿ ಮುಂದುವರಿಸಿದೆ ಎಂದು ಮಾದಿಗ ದಂಡೋರ ಸಮಿತಿಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಆಕ್ಷೇಪಿಸಿದರು.
ಅವರು, ಇಂದು ನಗರದ ಗಾಂಧಿನಗರದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾಜ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮಾದಿಗರ ಜನಸಂಖ್ಯೆಗೆ ತಕ್ಕ ಮೀಸಲು ಸಿಗುತ್ತಿಲ್ಲ. ಶೇ.15ರಷ್ಟು ಮೀಸಲಲ್ಲಿ ಮಾದಿಗರಿಗೆ ಪ್ರತಿಶತ ಮೂರರಷ್ಟು ಮಾತ್ರ ಸಿಗುತ್ತಿದೆ. ಶಿಕ್ಷಣ, ಔದ್ಯೋಗಿಕ ಕ್ಷೇತ್ರದಲ್ಲೂ ಸರಿಯಾದ ಪಾಲು ಸಿಗುತ್ತಿಲ್ಲ. ಎಸ್ಸಿ ಪಟ್ಟಿಗೆ ಸೇರಲ್ಪಟ್ಟ, ಅಸೃಶ್ಯರಲ್ಲದ ಲಂಬಾಣಿ, ಕೊರಚ, ಭೋವಿ ಸಮಾಜಗಳು ನಮ್ಮ ಹಕ್ಕು, ಅವಕಾಶ ಕಿತ್ತುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವರದಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಶೀಘ್ರವೇ ಒಂದು ತಿಂಗಳ ಕಾಲ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸುತ್ತಾಡುವೆ. 10 ಲಕ್ಷ ಜನರನ್ನು ಸೇರಿಸಿ, ಬೆಂಗಳೂರಿಗೆ ದಿಗ್ಬಂಧನ ಹಾಕಲಾಗುವುದು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಎರಡನ್ನೂ ತಿರಸ್ಕರಿಸೋಣ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ದೇವರಾಜ ಮಾತನಾಡಿ, ಮೀಸಲು ವರ್ಗೀಕರಣ ವಿಚಾರದಲ್ಲಿ ಮಾದಿಗ ಸಮಾಜದ ಹೋರಾಟದ ಕಿಚ್ಚು ಹೆಚ್ಚಬೇಕಿದೆ ಎಂದರು.
ವಕೀಲ ಅನೀಸ್ಪಾಷಾ ಮಾತನಾಡಿ, ಮೇಲ್ವರ್ಗದವರು ಕೇಳದಿದ್ದರೂ ಶೇ.10ರ ಮೀಸಲು ನೀಡುವ ಸರ್ಕಾರ , ಮಾದಿಗ ಸಮಾಜದ ಹಕ್ಕೊತ್ತಾಯಕ್ಕೆ ಸ್ಪಂದಿಸಿಲ್ಲ. ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾದಿಗ ದಂಡೋರ ಅಧ್ತಕ್ಷ ಬಿ.ನರಸಪ್ಪ ದಂಡೋರ, ಹಿರಿಯ ಉಪಾಧ್ಯಕ್ಷ ಎಂ.ಸಿ.ಶ್ರೀನಿವಾಸ, ಸಂಘಟನಾ ಕಾರ್ಯದರ್ಶಿ ಎಚ್. ರವಿಚಂದ್ರ, ಬಿ.ತಿಪ್ಪೇಸ್ವಾಮಿ, ಪಾಲಿಕೆ ಸದಸ್ಯ ಎಲ್.ಟಿ.ಗೋಣೆಪ್ಪ, ಎಸ್. ನಿಂಗಪ್ಪ, ಹೆಗ್ಗೆರೆ ರಂಗಪ್ಪ, ಮಾನಪ್ಪ, ಶಿವಮ್ಮ, ತಮ್ಮಣ್ಣ ಸೇರಿದಂತೆ ಇತರರು ಇದ್ದರು.