‘ಪ್ರಬಂಧ ಸಂಚಯ’-‘ಉತ್ತುಂಗ’ ಪುಸ್ತಕಗಳ ಬಿಡುಗಡೆಯಲ್ಲಿ ಆನಂದ ಋಗ್ವೇದಿ ಅಭಿಮತ
ದಾವಣಗೆರೆ, ಫೆ.28- ಭಾರತೀಯ ಹಿಂದೂ ಸಮಾಜ ಸ್ಥಗಿತವಾಗಿದೆ. ಹಾಗಾಗಿ ಅವಿಚ್ಚಿನವಾದ ಭಾರತೀಯ ನಾಗರಿಕ ಸಂಸ್ಕೃತಿಯ ಪ್ರಜೆಯ ಬೆಳಕು ಭಾರತೀಯರಲ್ಲಿ ಅರಳಬೇಕು ಎಂದು ಸಾಹಿತಿ ಮತ್ತು ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಆನಂದ ಋಗ್ವೇದಿ ಅಭಿಪ್ರಾಯಪಟ್ಟರು.
ಸದ್ಯೋಜಾತ ಮಠದಲ್ಲಿ ಸೇವಾ ಭಾರತಿ ಟ್ರಸ್ಟ್ ದಾವಣಗೆರೆ ವತಿಯಿಂದ ಹಮ್ಮಿಕೊಂಡಿದ್ದ ಹೊ.ವೆ. ಶೇಷಾದ್ರಿ ಅವರ ಆಯ್ದ ಲೇಖನಗಳ ಸಂಗ್ರಹ ‘ಪ್ರಬಂಧ ಸಂಚಯ’ ಹಾಗೂ ಕೃ. ಸೂರ್ಯನಾರಾಯಣ ಕುರಿತಾದ ಕೃತಿ ‘ಉತ್ತುಂಗ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜನ ಮಗ ರಾಜನಾಗಬೇಕು, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬೇಕು, ವೈಶ್ಯನ ಮಗ ವೈಶ್ಯನಾಗಬೇಕೆಂಬ ಸ್ಥಗಿತಗೊಳಿಸಲಾದ ಸಮಾಜದಲ್ಲಿ ನಾವಿದ್ದೇವೆ. ಇದನ್ನು ಸರಿಪಡಿಸುವಂತಹ ಕೀಲಿ ಕೈ ನಮ್ಮಗಳ ಕೈಯ್ಯಲಿದ್ದು, ಇದಕ್ಕೆ ಭಾರತೀಯ ಸಂಸ್ಕೃತಿಯೇ ದಿವ್ಯೌಷಧಿ. ನಾವು ಭಾರತೀಯರು, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದೇ ಎಂಬ ಸಾಮಾಜಿಕ ಪ್ರಜೆ ಮತ್ತು ಬದುಕು ಹಸನಾಗಿಸುವ ಅರಿವಿನ ಸಂದೇಶವು ಹಿರಿಯ ಚಿಂತಕರು ಕೊಡುಗೆಯಾಗಿ ನೀಡಿರುವ ಅಪಾರವಾದ ಸಾಹಿತ್ಯದಲ್ಲಿ ಅಡಕವಾಗಿವೆ ಎಂದು ತಿಳಿಸಿದರು.
ನಾವು ಭಾರತೀಯರು ಎಂದು ಹೆಮ್ಮೆಪಟ್ಟುಕೊಳ್ಳುವಂತಹ 5 ಸಾವಿರ ವರ್ಷಗಳ ಅವಿಚ್ಚಿನ್ನವಾದ ನಿರಂತರವಾದ ಸಾಮರಸ್ಯವನ್ನೊಳಗೊಂಡ ನಾಗರಿಕ ದೇಶದ ಸಂಸ್ಕೃತಿ ನಮ್ಮದು. ಯಾವುದೇ ಸ್ಥಗಿತತೆ ಇಲ್ಲದೇ ಅರಿತು ಬಾಳಿದ ಜೀವಂತ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ನಿರ್ಮಲವಾಗಿ, ಪರಿಶುದ್ಧತೆಯಿಂದ ಕಾಪಾಡುವುದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ನದಿಯಂತೆ ನಿರ್ಮಲವಾಗಿ ಹರಿಯುವ ಈ ಸಂಸ್ಕೃತಿಗೆ ನದಿಗಳಲ್ಲಿ ಇತ್ತೀಚಿಗೆ ಹರಿಯುವ ಕಲ್ಮಶದಂತೆ ಸಾಕಷ್ಟು ಅನಾಗರಿಕತೆ ಮೈದಾಳಿದೆ. ಮತಾಂತರ ದೊಡ್ಡ ಪಿಡುಗಾಗಿದೆ. ಅಸ್ಪೃಷ್ಯತೆ ಪಾಲನೆ ಹೆಚ್ಚಾಗಿದೆ. ಸಹಬಾಳ್ವೆ, ಭಾರತೀಯರೆಲ್ಲಾ ಹಿಂದೂಗಳೇ ಎಂಬ ಸಾಮಾಜಿಕ ತಿಳುವಳಿಕೆಯನ್ನು ಹಿಂದೆಯೇ ಖುಷಿ, ಮುನಿಗಳು ಭಾರತೀಯರಿಗೆ ಮನವರಿಕೆ ಮಾಡಿದ್ದಾರೆ. ಹೊ.ವೆ. ಶೇಷಾದ್ರಿ ಹಾಗೂ ಕೃ. ಸೂರ್ಯನಾರಾಯಣ ಅವರಂತಹ ಹಿರಿಯ ಚೇತನಗಳು ಸಹ ಹೇಗೆ ಬಾಳಬೇಕೆಂಬ ಬದುಕಿನ ದಾರಿಯನ್ನು ತಮ್ಮ ಸಾಹಿತ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.
ಉಡುಪಿಯ ಮಣಿಪಾಲ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ನಂದನ್ ಪ್ರಭು ಕೃತಿ ಪರಿಚಯ ಮಾಡಿದರು.
ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ, ಅತಿಥಿ ಗಣ್ಯರು ಪುಸ್ತಕಗಳ ಲೋಕಾರ್ಪಣೆಗೊಳಿಸಿದರು.
ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಕೋಲ್ಕುಂಟೆ ಸ್ವಾಗತಿಸಿದರು. ಡಾ. ಕಾರ್ತಿಕ್ ನಿರೂಪಿಸಿದರು. ಅಮರೇಶ್ ವಂದಿಸಿದರು.