ಉದ್ಯೋಗ, ಬಜೆಟ್ ನೆರವಿಗೆ ಪ್ರತಿಭಟನೆ

ದಾವಣಗೆರೆ, ಫೆ. 27 – ವಾಕ್ ಮತ್ತು ಶ್ರವಣ ನ್ಯೂನತೆಯುಳ್ಳವರಿಗೆ ಉದ್ಯೋಗ ಕಲ್ಪಿಸುವಂತೆ ಮತ್ತು ರಾಜ್ಯ ಬಜೆಟ್‌ನಲ್ಲಿ ನೆರವು ಕಲ್ಪಿಸುವಂತೆ ಒತ್ತಾಯಿಸಿ  ಜಿಲ್ಲಾ ಕಿವುಡರ ಸಂಘದ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೂಲಭೂತ ಹಕ್ಕು ಹಾಗೂ ಸೌಕರ್ಯ ಕಲ್ಪಿಸುವಂತೆ ಎಷ್ಟು ಬಾರಿ ಮನವಿ ಸಲ್ಲಿಸಿದರೂ ಕಡೆಗಣಿಸುತ್ತಾ ಬರಲಾಗಿದೆ. ಈ ಬಾರಿಯಾದರೂ ಸಮಸ್ಯೆ ಬಗೆಹರಿಸಿ, ಇಲ್ಲವಾದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಪ್ರತಿಭಟನೆಯಲ್ಲಿ ತೊಡಗಿದವರು ಹತಾಶೆ ಹೊರ ಹಾಕಿದ್ದಾರೆ.

ವಾಕ್ ಮತ್ತು ಶ್ರವಣ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 97 ಜನರಿಗೆ ಉದ್ಯೋಗದ ಭರವಸೆ ನೀಡಲಾಗಿತ್ತಾದರೂ, ಕೇವಲ ನಾಲ್ವರಿಗೆ ಉದ್ಯೋಗ ದೊರೆತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಹೊರಗುತ್ತಿಗೆ ಕೆಲಸ ನೀಡುವ ಸಂದರ್ಭದಲ್ಲಿ ವಾಕ್ ಮತ್ತು ಶ್ರವಣ ನ್ಯೂನತೆ ಉಳ್ಳವರಿಗೆ ಪ್ರತಿ ಇಲಾಖೆಯಲ್ಲಿ ಒಂದು ಕೆಲಸ ನೀಡಿದರೂ ನಮಗೆಲ್ಲ ಉದ್ಯೋಗ ಸಿಗುತ್ತದೆ. ಸ್ವಯಂ ಉದ್ಯೋಗಕ್ಕೂ ಅವಕಾಶ ಕಲ್ಪಿಸ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಿ.ಎಂ.ಸಿ. ವತಿಯಿಂದ ಸೌಲಭ್ಯ ವಿತರಿಸುವಾಗ ಗುಣಮಟ್ಟದ ಶ್ರವಣ ಸಾಧನ ನೀಡಬೇಕು. ವಾಕ್ ಮತ್ತು ಶ್ರವಣ ನ್ಯೂನತೆ ಉಳ್ಳವರಿಗೆ ವಾಹನ ಚಾಲನೆ ಅನುಮತಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಎಸ್. ಆಸೀಫ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಪಿ. ರಾಜಶೇಖರ್, ಬಿ.ಟಿ. ಗಿರೀಶ್, ಖಜಾಂಚಿ ಎ. ನಾಗರಾಜ, ಸದಸ್ಯರಾದ ಬಿ.ವಿ. ಮಂಜುನಾಥ, ಆರ್. ಸಲೀಂ ಸಾಬ್, ಜೆ. ಇರ್ಫಾನ್, ಪೂಜಾ, ಎಂ.ಕೆ. ಶೃತಿ, ಬಿ.ಟಿ. ವಿಶ್ವನಾಥ ನಿಂಬಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!