ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ದಾವಣಗೆರೆ ವಿವಿ ಗುತ್ತಿಗೆ ನೌಕರರು

ದಾವಣಗೆರೆ, ಫೆ.27 –  ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆಸಲಾಗುತ್ತಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ವಿಶ್ವವಿದ್ಯಾ ನಿಲಯದ ಕುಲಪತಿಗಳ ಆದೇಶದ ಮೇರೆಗೆ ವಿವಿ ಕುಲಸಚಿವೆ  ಪ್ರೊ. ಗಾಯತ್ರಿ ದೇವರಾಜ್ ಅವರು ಆಗಮಿಸಿ ಬೇಡಿಕೆಗಳನ್ನು ಪೂರೈಸಿರುವುದಾಗಿ ಭರವಸೆ ನೀಡಿದ ಕಾರಣ ಕುಲಸಚಿವರ ಭರವಸೆಗೆ ಮನ್ನಣೆ ನೀಡಿ ರಾತ್ರಿಯೇ  ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಎಂದು ಸಂಘವು ತಿಳಿಸಿದೆ.

ಈ ವೇಳೆ ಕುಲಸಚಿವರು, ನೌಕರರನ್ನು ಸಂಚಿತ ವೇತನದಡಿ ನೇಮಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆಗೆ ವಿಶ್ವವಿದ್ಯಾನಿಲಯದಿಂದ ಶಿಫಾರಸ್ಸಿನ ವಿಸ್ತೃತ ವರದಿ ಸಲ್ಲಿಸಲಾಗುವುದು. ಫೆಬ್ರವರಿ ತಿಂಗಳಿನಿಂದಲೇ ಜಾರಿಯಾಗುವಂತೆ ಈಗ ನೀಡುತ್ತಿರುವ ಕನಿಷ್ಟ ವೇತನಕ್ಕೆ ಹೆಚ್ಚುವರಿ ಯಾಗಿ 500 ರೂ.ಗಳನ್ನು ಹೆಚ್ಚಿಸಲಾಗುವುದು.

ಏಪ್ರಿಲ್ ತಿಂಗಳಿನಿಂದಲೇ ಕಾರ್ಮಿಕ ಇಲಾಖೆ ನಿಗದಿ ಪಡಿಸುವ ತುಟ್ಟಿಭತ್ಯೆಯನ್ನು ನೀಡಲಾಗುವುದು. 2016ನೇ ಸಾಲಿಗೆ ಸಂಬಂಧಿಸಿದ ಕನಿಷ್ಟ ವೇತನದ ವ್ಯತ್ಯಾಸದ ಹಣಕ್ಕೆ ಸಂಬಂಧಿಸಿದ ಹೈಕೋರ್ಟ್ ರಿಟ್ ಅಪೀಲ್ ಹಿಂಪಡೆದು ನೌಕರರಿಗೆ ಹಣ ಪಾವತಿಸಲಾಗುವುದು. ಮಾರ್ಚ್ ತಿಂಗಳಿನಿಂದ ಭದ್ರತಾ ಸಿಬ್ಬಂದಿಗಳಿಗೆ ವಾರದ ರಜೆ, ತಿಂಗಳ ಸಾಂದರ್ಭಿಕ ರಜೆ, ಯೂನಿಫಾರಂ, ಶೂಗಳನ್ನು ವಿತರಿಸಲಾಗುವುದು. ಇ.ಪಿ.ಎಸ್ ವ್ಯತ್ಯಾಸದ ಹಣಕ್ಕೆ ಕೋರ್ಟಿನಲ್ಲಿ ಗುತ್ತಿಗೆದಾರರು ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ನೌಕರರಿಗೆ ವ್ಯತ್ಯಾಸದ ಇಪಿಎಫ್ ಮೊತ್ತವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಘ ತಿಳಿಸಿದೆ.

ಈ ವೇಳೆ ಸಂಘದ ಅಧ್ಯಕ್ಷ ಮಂಜುನಾಥ್ ಕೈದಾಳೆ, ಕಾರ್ಯದರ್ಶಿ  ಸಣ್ಣಕೊಟ್ರಗೌಡ, ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ್, ವಿನುತಾ, ಸುಮಿತ್ರಾ ಸೇರಿದಂತೆ ಹಲವಾರು ಕಾರ್ಮಿಕರು ಇದ್ದರು.

error: Content is protected !!