ಗುರುಬಸಮ್ಮ ಪ್ರೌಢಶಾಲೆಯಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದಲ್ಲಿ ಸದಾನಂದ ಹೆಗಡೆ
ದಾವಣಗೆರೆ, ಫೆ.27- ಶಿಕ್ಷಣದ ಜತೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಎಲ್ಲ ಪ್ರಕಾರಗಳ ಸಂಯೋಜನೆಯಿಂದ ವಿದ್ಯಾರ್ಜನೆಗೆ ಪರಿಪೂರ್ಣತೆ ಬರುತ್ತದೆ. ವಿದ್ಯಾರ್ಥಿಗಳ ಸುದೀರ್ಘ ಜೀವನದಲ್ಲಿ ವಿದ್ಯಾಭ್ಯಾಸದ ಜೊತೆಯಲ್ಲೇ ಕಲೆ ಬರುತ್ತದೆ ಎಂದು ಪತ್ರಕರ್ತ ಸದಾನಂದ ಹೆಗಡೆ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ನಗರದ ನರಸರಾಜ ರಸ್ತೆಯ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಯಕ್ಷರಂಗ – ಯಕ್ಷಗಾನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ನಿನ್ನೆ ದಿನ ಯಕ್ಷಗಾನ ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಚಟುವಟಿಕೆಗಳು ಯಕ್ಷಕಲಾ ಪರಂಪರೆಗಳಲ್ಲಿ ಕಠಿಣ ಪರಿಶ್ರಮದಿಂದ, ಗಂಭೀರವಾಗಿ ಬದ್ಧತೆಯಿಂದ ತೊಡಗಿಸಿಕೊಂಡರೆ ಯಕ್ಷಕಲೆ ಕರಗತವಾಗುತ್ತದೆ. ಜ್ಞಾನಾರ್ಜನೆಯ ಮೂಲ ಕಲಾ ಪರಂಪರೆ. ಕರ್ನಾಟಕದ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನ ಕಲಿಕೆಯಿಂದ ಪೂಜ್ಯತೆಯ ಭಾವನೆಯಿಂದ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಮಂಜುನಾಥ್, ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ, ಹಾಗೂ ಗುರುಬಸಮ್ಮ ವಿ.ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹೆಚ್. ನಿಂಗಪ್ಪ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಯಲ್ಲಿ ಕಲಾ ಪರಂಪರೆಯ ಮೇಳೈಕೆಯೊಂದಿಗೆ ಮುಂದುವರೆದರೆ ಅವರ ಉನ್ನತ ಸಾಧನೆಗೆ ಭದ್ರವಾದ ಬುನಾದಿ. ಹೊಸ ತಂತ್ರಜ್ಞಾನದ ಭರಾಟೆಯಲ್ಲಿ ಮರೆಯಾಗುತ್ತಿರುವ ನಮ್ಮ ನಾಡು – ನುಡಿಯ ಕಲಾ ಪ್ರಕಾರಗಳನ್ನು ಪುನರುತ್ಥಾನಗೊಳಿಸುವ ಈ ಯಕ್ಷಗಾನ ಪ್ರಕಾರ ಮಕ್ಕಳಲ್ಲಿ ಸ್ಪೂರ್ತಿ ಮೂಡಿಸುತ್ತದೆ ಎಂದರು.
ಗುರುಬಸಮ್ಮ ವಿ.ಚಿಗಟೇರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಈ ಸಮಾರಂಭದಲ್ಲಿ ವಿದ್ಯಾರ್ಥಿನಿ ಹರಿಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಜೆ.ಕೆ.ಅನುಷ ಸ್ವಾಗತಿಸಿದರು.
ಕಲಾಕುಂಚ ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷರಂಗದ ಯಕ್ಷಗಾನ ಶಿಬಿರದ ಸಂಚಾಲಕ ಬಿ.ಎನ್.ಪಾರ್ಶ್ವನಾಥ್ ಜೈನ್, ಯಕ್ಷಗಾನ ಗುರುಗಳಾದ ಹಟ್ಟಿಯಂಗಡಿ ಆನಂದಶೆಟ್ಟಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯ ಎಂ.ಎಸ್.ಪ್ರಸಾದ್, ಹಿರಿಯ ಯಕ್ಷಗಾನ ಕಲಾವಿದರಾದ ಅನಂತ್ ಹೆಗಡೆ, ಪ್ರದೀಪ್ ಕಾರಂತ್, ಕಾರ್ಯಕ್ರಮದ ಸಂಯೋಜಕ ಎನ್. ರಂಗನಾಥ್ ಮುಖ್ಯ ಶಿಕ್ಷಕರುಗಳಾದ ಸುರೇಶ್ ನಾಯ್ಕ್, ಶ್ರೀಮತಿ ವೀರಮ್ಮ ಎಂ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಗೆ ಸಾಂಕೇತಿಕವಾಗಿ ಯಕ್ಷಗಾನ ಹೆಜ್ಜೆಗಳೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕ ಎಸ್.ವಿ. ನಾಗರಾಜ್ ವಂದಿಸಿದರು.