ಜಗಳೂರು, ಫೆ.25- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಸರ್ಕಾರಿ ಸೌಲಭ್ಯಗಳು ಲಭಿಸಲಿ ಎಂದು ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಜನಸಾಮಾನ್ಯರಿಗೆ ದೊರೆಯುವ ಸೌಲಭ್ಯಗಳು ಕೇವಲ ಉಳ್ಳವರ ಪಾಲಾಗುತ್ತಿವೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಂವಿಧಾನ ಬದ್ದ ಹಕ್ಕು ಮತ್ತು ಮೂಲಭೂತ ಕರ್ತವ್ಯ ಅರಿತು ಸರ್ಕಾರದಿಂದ ಸೌಲಭ್ಯಗಳನ್ನು ಅರ್ಹರು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಿರಿಯ ವಕೀಲ ಕೆ.ಎಂ. ಬಸವರಾಜಪ್ಪ ಮಾತನಾಡಿ, ಪರಿಶಿಷ್ಟರಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಸಾಮಾನ್ಯರು ಸದುಪಯೋಗ ಪಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತಿದ್ದು. 62 ನೇ ತಿದ್ದುಪಡಿ ಮೂಲಕ ರಾಜಕೀಯ ಮೀಸಲಾತಿ ಸೌಲಭ್ಯ ತಿದ್ದುಪಡಿಯಾಗಿದೆ. 62 ಮತ್ತು 65 ನೇ ತಿದ್ದುಪಡಿಯಿಂದ ಶಿಕ್ಷಣ ಸಂಸ್ಥೆಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ತಿಪ್ಪೇಸ್ವಾಮಿ, ಕರಿಬಸಯ್ಯ, ಓಬಳೇಶ್, ಶರಣಪ್ಪ, ಎಚ್. ಬಸವರಾಜಪ್ಪ, ಪಂಪಣ್ಣ, ರುದ್ರೇಶ್, ಡಿ.ವಿ. ನಾಗಪ್ಪ ಉಪಸ್ಥಿತರಿದ್ದರು.