ಜಗಳೂರು, ಫೆ.25- ಹಿರಿಯರು, ಯುವಕರುಗಳನ್ನೊಳಗೊಂಡ ಸಮರ್ಥ ಅಭ್ಯರ್ಥಿಗಳಿದ್ದು, ರಾಜ್ಯ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ನಮ್ಮ ತಂಡದ 25 ಅಭ್ಯಥಿಗಳಿಗೂ ಅಮೂಲ್ಯ ಮತ ನೀಡಿ ಗೆಲ್ಲಿಸಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, `ಜನತಾವಾಣಿ’ ಉಪ ಸಂಪಾದಕ ಇ.ಎಂ. ಮಂಜುನಾಥ ಜಗಳೂರು ತಾಲ್ಲೂಕು ಪತ್ರಕರ್ತರಲ್ಲಿ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಂಗವಾಗಿ ನಡೆದ ಸಭೆಯಲ್ಲಿ ಮತ ಯಾಚಿಸಿ ಅವರು ಮಾತನಾಡಿದರು.
ಚುನಾವಣೆ ನಡೆಯುವುದು ಒಳ್ಳೆಯ ಬೆಳವಣಿಗೆ. ಎಲ್ಲಾ ತಾಲ್ಲೂಕು ಮಟ್ಟದ ಪತ್ರಕರ್ತರ ಸಮಸ್ಯೆಗಳು ಸೇರಿದಂತೆ, ಹಲ ವಾರು ವಿಷಯಗಳು ನಮಗೆ ತಿಳಿಯುತ್ತವೆ. ವಸತಿ, ನಿವೇಶನ, ಸರ್ಕಾರಿ ಬಸ್ ಪಾಸ್ ಸೇರಿದಂತೆ ಹಲವು ಸರ್ಕಾರದ ಸೌಲಭ್ಯ ಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪತ್ರಕರ್ತರಾಗಿ ಅನೇಕ ವರ್ಷ ಸೇವೆ ಸಲ್ಲಿಸುವ ಜೊತೆಗೆ ಲಯನ್ಸ್ ಕ್ಲಬ್, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಘಟನೆಗಳಲ್ಲೂ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ ಎಂದರು.
ಹಾಲಿ ಜಿಲ್ಲಾಧ್ಯಕ್ಷ ವೀರಪ್ಪ ಎಂ.ಬಾವಿ ಮಾತನಾಡಿ, ಹಿಂದೆ ಆಡಳಿತ ನಿರ್ವಹಿಸಿದ ತಂಡ ಸಮರ್ಥವಾಗಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಕೆಲಸ ನಿರ್ವಹಿಸಿದೆ. ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ, ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಿದೆ. ಈಗಿನ ಇ.ಎಂ. ಮಂಜುನಾಥ್, ಪೇಪರ್ ಚಂದ್ರಣ್ಣ ಸೇರಿದಂತೆ ಹಿರಿಯರು, ಯುವಕರುಗಳ ನ್ನೊಳಗೊಂಡ ತಂಡಕ್ಕೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯ ಸಮಿತಿ ಸದಸ್ಯ ಚಂದ್ರಣ್ಣ ಮಾತನಾಡಿ, ಪತ್ರಕರ್ತರ ಬಸ್‌ಪಾಸ್ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಸರ್ಕಾರ ಒಪ್ಪಿಗೆ ನೀಡಿದೆ. ಹತ್ತು ವರ್ಷ ಸಂಘದ ಹಾಗೂ ಪತ್ರಿಕೆಗಳಲ್ಲಿ ಸೇವೆ ಮಾಡಿದವರಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇಂತಹ ಅಭಿವೃದ್ಧಿಯ ಸಮರ್ಥ ತಂಡದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.
ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ಪತ್ರಕರ್ತರ ಸಮಸ್ಯೆಗಳು ಬಹಳಷ್ಟು ಇವೆ. ಹಂತ ಹಂತವಾಗಿ ಬಗೆಹರಿಸಿಕೊಳ್ಳಬೇಕಿದೆ. ತಾಲ್ಲೂಕು ಮಟ್ಟದಲ್ಲೂ ಪತ್ರಕರ್ತರಿಗೆ ಕಾರ್ಯಾಗಾರಗಳನ್ನು ಮಾಡಿ, ಗ್ರಾಮೀಣ ಮಟ್ಟದ ಪತ್ರಕರ್ತರ ಸಮಸ್ಯೆಗಳನ್ನು ಇತ್ಯರ್ಥ ಮಾಡಿ ಕೊಡುವ ಭರವಸೆ ನೀಡಿದ ತಂಡದ ಸಮರ್ಥ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಇ.ಎಂ. ಮಂಜುನಾಥ, ಚಂದ್ರಣ್ಣ ನೇತೃತ್ವದ ತಂಡಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಭಾರತೀಯ ಪತ್ರಕರ್ತರ ಒಕ್ಕೂಟದ ಸಮಿತಿ ಸದಸ್ಯ ಅಣಬೂರು ಮಠದ ಕೊಟ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಹಿರಿಯ ಪತ್ರಕರ್ತ ಬಿ.ಪಿ. ಸುಭಾನ್, ಡಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ಅವಿರೋಧವಾಗಿದ್ದು, ಜಿಲ್ಲಾ ಮಟ್ಟದಲ್ಲೂ ಅವಿರೋಧ ಆಯ್ಕೆಯಾಗಿದ್ದರೆ ಉತ್ತಮವಾಗಿತ್ತು. ಚುನಾವಣೆ ಆದರೂ ಉತ್ತಮ ಬೆಳವಣಿಗೆ. ಸಂಘದ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸುವುದು ಎಲ್ಲರಿಂದಲೂ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಗನೂರು ಮಂಜಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ, ಹಿರಿಯ ಪತ್ರಕರ್ತ ಬಿ.ಪಿ.ಸುಭಾನ್, ಡಿ. ಶ್ರೀನಿವಾಸ್, ಖಜಾಂಚಿ ಹೆಚ್.ಎಂ.ಪಿ.ಕುಮಾರ್, ಕಾರ್ಯದರ್ಶಿ ವೀರೇಶ್, ಎಸ್.ಹನುಮಂತಪ್ಪ, ಇಂದುಶೇಖರ್ ಎನ್.ಎಂ., ಎನ್.ಆರ್.ರವಿ, ಮುದ್ದಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ಎಂ.ಸಿ. ಬಸವರಾಜ್, ಜೆ.ಓ. ರವಿಕುಮಾರ್, ಬಾಬು, ಮಾರುತಿ, ಮಂಜಯ್ಯ, ಜಗದೀಶ್, ರಕೀಬ್, ಸೈಯದ್ ವಾಸಿಂ, ರಾಜಪ್ಪ, ವೇದಮೂರ್ತಿ, ಸಂದೀಪ್ ಸೇರಿದಂತೆ, ತಾಲ್ಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು.