ಕಾರ್ಮಿಕರ ಭವಿಷ್ಯ ನಿಧಿಯಲ್ಲಿನ ವಂಚನೆ ತಡೆಯಬೇಕು

ನಗರದಲ್ಲಿ ಎಐಯುಟಿಯುಸಿ ಪ್ರತಿಭಟನೆ

ದಾವಣಗೆರೆ, ಫೆ.25- ಜಿಲ್ಲೆಯ ಕಾರ್ಮಿಕರಿಗೆ ಭವಿಷ್ಯ ನಿಧಿಯಲ್ಲಿನ ವಂಚನೆ ತಡೆಯಬೇಕು, ಸಹಾಯಕ ಆಯುಕ್ತರ ಭವಿಷ್ಯ ನಿಧಿ ಅಧಿಕಾರಿ ನೇಮಿಸಬೇಕು ಹಾಗೂ ಇಎಸ್‍ಐ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ನಗರದ ಭವಿಷ್ಯ ನಿಧಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ವ್ಯಾಪ್ತಿಗೆ ಬರುವ ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳು, ಬಟ್ಟೆ ವ್ಯಾಪಾರಸ್ಥ ಸಂಸ್ಥೆಗಳು, ಔಷಧ ಸರಬರಾಜು ಸಂಸ್ಥೆಗಳು, ಹೋಟೆಲ್ ಇನ್ನಿತರೆ ಖಾಸಗೀ ಸಂಸ್ಥೆಗಳಲ್ಲಿ ಕಾರ್ಮಿಕರು ದಿನಗೂಲಿ ಕೆಲಸ ಮಾಡುತ್ತಿದ್ದು, ಅವರಿಗೆ ಉದ್ಯೋಗ ನೀಡುವ ಮಾಲೀಕರು ಅಥವಾ ಏಜೆನ್ಸಿಗಳು ಇಪಿಎಫ್ ಹಾಗೂ ಇಎಸ್‍ಐ ಹಣ ತುಂಬುವಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಾಗಲೇ ದೂರು ನೀಡಿರುವ ಬಿ.ಕೆ.ಆರ್.ಸ್ವಾಮಿ ಸೆಕ್ಯೂರಿಟಿ ಏಜೆನ್ಸಿ, ಟಾರ್ಗೆಟ್ ಏಜೆನ್ಸಿ, ದಾವಣಗೆರೆ ಸೆಕ್ಯುರಿಟಿ ಏಜೆನ್ಸಿ ಮತ್ತಿತರರು ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ತುಂಬುವಲ್ಲಿ ವಂಚನೆ ಮಾಡಿದ್ದು, ಈ ಏಜೆನ್ಸಿ ಮಾಲೀಕರ ವಿರುದ್ದ ದೂರು ದಾಖಲಿಸಿಕೊಂಡು 7-ಎ ಅಡಿಯಲ್ಲಿ ತ್ವರಿತವಾಗಿ ವಿಚಾರಣೆ ಆರಂಭಿಸಬೇಕು ಮತ್ತು ಇಂತಹ ಏಜೆನ್ಸಿಗಳ ಇ.ಪಿ.ಎಫ್ ನೋಂದಣಿ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. 

ಹಿಂದಿನಂತೆ ಜಿಲ್ಲೆಯ ಇ.ಪಿ.ಎಫ್ ಕಛೇರಿಗೆ ಸಹಾಯಕ ಪ್ರಾಂತೀಯ ಅಧಿಕಾರಿಯನ್ನು ನಿಯೋಜಿಸಬೇಕು. ಇ.ಪಿ.ಎಫ್ ಗೆ ಸಂಬಂಧಿಸಿದ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಬೇಕು ಮತ್ತು ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಉಪಾಧ್ಯಕ್ಷ ಶಿವಾಜಿರಾವ್, ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಮಂಜುಳಮ್ಮ, ಹನುಮಂತಪ್ಪ, ಮನೋಹರ್, ಸುಮ, ಲೋಕೇಶ್, ಬೀರಲಿಂಗಪ್ಪ, ಲಕ್ಷ್ಮಣ್, ಪರಶುರಾಮ್, ವಿರುಪಾಕ್ಷಪ್ಪ, ಪರಮೇಶ್ವರ್, ರತ್ನಮ್ಮ, ಸಿದ್ದಮ್ಮ, ರಾಧಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!