ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ರಾಂತಿಯಾದಾಗ ಹಿಂದುಳಿದ ಸಮಾಜಗಳು ಮುಂದೆ ಬರಲು ಸಾಧ್ಯ

ಶ್ರೀ ಅಂಬಿಗರ ಚೌಡಯ್ಯ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಅಭಿಮತ

ಹರಿಹರ,ಫೆ.25- ಹಿಂದುಳಿದ ಸಮಾಜಗಳು ಮುಂದೆ ಬರಬೇಕಾದರೆ ಆ ಸಮಾಜಗಳಲ್ಲಿ ಧಾರ್ಮಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದು ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ದೇವಿಯ ನೂತನ ವಿಗ್ರಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಧಾರ್ಮಿಕ ಕ್ರಾಂತಿಯಾದರೆ ಆ ಸಮಾಜ ಮೌಢ್ಯತೆಯಿಂದ ಹೊರಬಂದು  ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ಸಾಧ್ಯ. ಶಿಕ್ಷಣ ಕ್ರಾಂತಿಯಾದರೆ ಆ ಸಮಾಜ ಶೀಘ್ರ ಮುಂದೆ ಬರುತ್ತದೆ. ರಾಜಕೀಯ ಕ್ರಾಂತಿಯಾದರೆ ಎಲ್ಲಾ ರೀತಿಯಿಂದಲೂ ಸೌಲಭ್ಯಗಳು ಸಿಗಲು ಸಾಧ್ಯ ಎಂದು ಅವರು ವಿವರಿಸಿದರು.

 ಸಂವಿಧಾನದ ಪ್ರಕಾರ ಸಣ್ಣದಾದ ಗಂಗಾಮತ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗದಿರುವುದು ದುರ್ದೈವದ ಸಂಗತಿ. ಶತ ಶತಮಾನಗಳಿಂದಲೂ ತುಳಿತಕ್ಕೆ ಒಳಗಾದ ಸಮಾಜಗಳು ಸ್ವತಃ ತಮ್ಮ ಕೈಯ್ಯೂರಿ, ತಾವೇ ಎದ್ದೇಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು  ಕೂಲಂಬಿ ಮಹಾದೇವಪ್ಪ ವಹಿಸಿದ್ದರು. ಕಾರ್ಯಕ್ರಮ ವನ್ನು ಮಾಜಿ ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ ಮಾಗಾನಹಳ್ಳಿ, ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ರೈಸ್‌ ಮಿಲ್ ಮಾಲೀಕ ವಿರೂಪಾಕ್ಷಪ್ಪ, ನಿವೃತ್ತ ಪೆೊಲೀಸ್ ಅಧಿಕಾರಿ ಕೆ.ಎಸ್. ದೇವೆಂದ್ರಪ್ಪ, ನಾಗೇಂದ್ರಪ್ಪ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಶಾಸಕ ಎಸ್.ರಾಮಪ್ಪನವರ ಪುತ್ರ ಯತಿರಾಜ್, ಬೆಸ್ಕಾಂನ ಜಿ.ರಾಮಚಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಸಮಾಜದ ಮುಖಂಡರಾದ ಜಿ.ಬಿ.ಬಸವರಾಜಪ್ಪ, ಕೆಂಚನಹಳ್ಳಿ ಮಹಾಂತೇಶಪ್ಪ, ಪೇಟೆ ಬಸಪ್ಪ, ರಾಟಿ ರಮೇಶ್, ಬಲ್ಲೂರು ಹೆಚ್. ನಾಗರಾಜ್, ಎಂ.ಎನ್.ಮಂಜುನಾಥ್, ಜಿ.ಹೆಚ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!