ಜಿಲ್ಲೆಗೆ ಅಂಚೆ ಅಧೀಕ್ಷಕರ ವಿಭಾಗೀಯ ಕಛೇರಿ ಮಂಜೂರು

ಜಿಲ್ಲೆಗೆ ಅಂಚೆ ಅಧೀಕ್ಷಕರ ವಿಭಾಗೀಯ ಕಛೇರಿ ಮಂಜೂರು - Janathavaniದಾವಣಗೆರೆ, ಫೆ. 25 – ಕೇಂದ್ರ ಸರ್ಕಾರವು ಜಿಲ್ಲೆಗೆ  ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗೀಯ ಕಛೇರಿಯನ್ನು ಮಂಜೂರು ಮಾಡಿದೆ ಎಂದು  ಸಂಸದ ಡಾ. ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗೀಯ ಕಛೇರಿ ಬೇಕು ಎನ್ನುವುದು ಸಾರ್ವತ್ರಿಕ ಕೂಗಾಗಿತ್ತು, ಇದನ್ನು ಮನ ಗಂಡು ಪ್ರತ್ಯೇಕ ಅಂಚೆ ಕಛೇರಿಗೆ ಮನವಿ ಮಾಡಲಾಗಿತ್ತು. 

ಕಳೆದ ನಾಲ್ಕೈದು ವರ್ಷಗಳಲ್ಲಿ ಸಂವಹನ ಸಚಿವಾಲಯ ಇಲಾಖೆಗೆ ಆರ್ಥಿಕ ಹೊರೆಯಾಗುವಂತಹ ಯಾವುದೇ ಹೊಸ ಕಛೇರಿಗಳನ್ನು ತೆರೆಯಲು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಜಿಲ್ಲೆಗೆ ವಿಭಾಗೀಯ ಕಛೇರಿ ಅಗತ್ಯ ಇದೆ ಎಂಬುದನ್ನು ಸಂಸದರು ಹಲವಾರು ಬಾರಿ ಸಂಸತ್ತಿನ ಶೂನ್ಯ ವೇಳೆಯಲ್ಲಿ ಮಾತನಾಡಿದ್ದರಲ್ಲದೇ ಸಚಿವರನ್ನು ಖುದ್ದು ಭೇಟಿ ಮಾಡಿ ಒತ್ತಡ ಹೇರಿದ್ದರು.  

ಇದೀಗ ಸಂವಹನ ಸಚಿವಾಲಯದ ಸಚಿವ ಅಶ್ವಿನಿ ವೈಷ್ಣವ್‌ರವರ ಸೂಚನೆ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಯನ್ನು ಬೇರ್ಪಡಿಸಿ, ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗೀಯ ಕಛೇರಿಯನ್ನು ಹೊಸದಾಗಿ ರಚನೆ ಮಾಡಿದ್ದು, ಮಂಜೂ ರಾತಿ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಮೊದಲು ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಶಿವಮೊಗ್ಗ ಅಂಚೆ ಅಧೀಕ್ಷಕರ ಕಛೇರಿ ವ್ಯಾಪ್ತಿಗೆ ಒಳಪಟ್ಟಿದ್ದವು.  ಉಳಿದಂತೆ ದಾವಣಗೆರೆ, ಹರಿಹರ, ಜಗಳೂರು, ತಾಲ್ಲೂಕುಗಳು ಚಿತ್ರದುರ್ಗ ಅಂಚೆ ಅಧೀಕ್ಷಕರ ಕಛೇರಿ ವ್ಯಾಪ್ತಿಗೆ ಒಳಪಟ್ಟಿ ದ್ದವು. ಈಗ ದಾವಣಗೆರೆ ಜಿಲ್ಲೆಯ ಎಲ್ಲಾ ಆರು ತಾಲ್ಲೂಕು ಗಳನ್ನು ಒಳಗೊಂಡು ದಾವಣಗೆರೆ ಅಂಚೆ ಅಧೀಕ್ಷಕರ ಕಛೇರಿಯನ್ನು ಹೊಸದಾಗಿ ರಚನೆ ಮಾಡಲಾಗಿದೆ. 

 ಅಂಚೆ ಕಛೇರಿಯ ಕೆಲಸಗಳಿಗಾಗಿ ಜಿಲ್ಲೆಯ ಜನರು ಚಿತ್ರದುರ್ಗ ಹಾಗೂ ಶಿವಮೊಗ್ಗಕ್ಕೆ ಓಡಾಟ ಮಾಡುವುದು ಇನ್ನು ಮುಂದೆ ತಪ್ಪಲಿದೆ ಎಂದಿರುವ ಸಂಸದ  ಸಿದ್ದೇಶ್ವರ ಅವರು, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‍ರವರನ್ನು ಅಭಿನಂದಿಸಿದ್ದಾರೆ.

error: Content is protected !!