ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಮಾಜಿ ಶಾಸಕ ಶಾಂತನಗೌಡ ಎಚ್ಚರಿಕೆ
ಹೊನ್ನಾಳಿ,ಫೆ.23- ಇನ್ನು ಮುಂದೆ ನನ್ನ ವಿಚಾರವಾಗಿ ಮಾತನಾಡಬೇಕಾದರೆ ತಲೆ ಸರಿ ಇಟ್ಟುಕೊಂಡು ಮಾತಾಡಬೇಕು, ಇಲ್ಲದಿದ್ದರೆ ಹೆಡೆಮುರಿ ಕಟ್ಟಿ ಬಿಸಾಕುತ್ತೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆಯಿತು.
ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿ `ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆೆ’ ಸಮಾರಂಭದಲ್ಲಿ ರೇಣುಕಾಚಾರ್ಯ ನನ್ನನ್ನು ಹಾಗೆ ಕರೆದಿದ್ದಾರೆ. ನನಗೆ ಮುದಿ ಎತ್ತು, ಕಳ್ಳ ಎತ್ತು ಎನ್ನುತ್ತೀಯಾ ಎಂದು ಆಕ್ರೋಶಭರಿತರಾಗಿ ಮಾತನಾಡಿದರು.
ನನಗೆ 73 ವರ್ಷ, ನಿನಗೆ ತಾಕತ್ತಿದ್ದರೆ ಬಾ ನನ್ನ ಜೊತೆಗೆ ರನ್ನಿಂಗ್ ರೇಸ್ ಮಾಡಲಿಕ್ಕೆ, ನನ್ನ ಜೊತೆಗೆ ಹೆಜ್ಜೆ ಹಾಕು, ಇಬ್ಬರೂ ವಾಕಿಂಗ್ ಹೋಗೋಣ ಎಂದು ಆಹ್ವಾನ ಕೊಟ್ಟ ಸಂಗತಿಯೂ ನಡೆಯಿತು.
ನಾನು ಈ ಹಿಂದೆ ರೇಣುಕಾಚಾರ್ಯ ಮತ್ತು ಅವರ ತಾಲ್ಲೂಕು ಆಡಳಿತದ ಬಗ್ಗೆ ಭ್ರಷ್ಟಾಚಾರ ಕುರಿತು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದೆ, ಈಗಲೂ ಆಹ್ವಾನಿಸುತ್ತೇನೆ, ಹಿರೇಕಲ್ಮಠಕ್ಕೆ ಬಾ ಎಂದು ಸವಾಲು ಹಾಕಿದರು.
ಈಶ್ವರಪ್ಪ ಒಬ್ಬ ಹಿರಿಯ ರಾಜಕಾರಣಿ. ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡು ವಂತಹ ಹೇಳಿಕೆ ಕೊಡಬಾರದು. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎನ್ನುವ ಅವರ ಹೇಳಿಕೆ ಸಂವಿಧಾನ, ಕಾನೂನು ಬಾಹಿರ ಎಂದು ಶಾಂತನಗೌಡ ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ. ಸಿದ್ದಪ್ಪ, ಡಾ. ಈಶ್ವರನಾಯ್ಕ, ಜಿ.ಪಂ. ಸದಸ್ಯ ಡಿ.ಜಿ. ವಿಶ್ವನಾಥ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಚೀಲೂರು ವಾಜೀದ್, ದಿಡಗೂರು ತಮ್ಮಣ್ಣ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಡಿ.ವಿಜೇಂದ್ರಪ್ಪ, ಎಚ್.ಬಿ. ಅಣ್ಣಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ನಾಗೇಂದ್ರಪ್ಪ ಹಾಗು ಇತರರಿದ್ದರು.